ಮಂಗಳೂರು: ಯಾವುದೇ ನಿರ್ದಿಷ್ಟ ಸಮುದಾಯದ ಅಭಿವೃದ್ಧಿಗಾಗಿ ನಿಗಮ, ಮಂಡಳಿ ಸ್ಥಾಪಿಸುವುದು ಸ್ವಾಗತಾರ್ಹ. ಆದರೆ ಈ ದೇಶದ ಅತಿದೊಡ್ಡ ಅಲ್ಪಸಂಖ್ಯಾತರಾಗಿರುವ ಮುಸಲ್ಮಾನರು ಎಲ್ಲ ರಂಗಗಳಲ್ಲೂ ಹಿಂದುಳಿದಿದ್ದಾರೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಅವರನ್ನು ಮೇಲೆತ್ತ ಬೇಕಾದಂತಹ ಹೊಣೆಗಾರಿಕೆ ಪ್ರತಿ ರಾಜ್ಯ ಸರಕಾರಗಳ ಮೇಲೆ ಇದೆ. ಆದಷ್ಟು ಬೇಗ ಮುಸ್ಲಿಂ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿಗಳು ಸ್ಥಾಪಿಸಬೇಕೆಂದು ಯುನಿವೆಫ್ ಕರ್ನಾಟಕ ಸರಕಾರವನ್ನು ಆಗ್ರಹಿಸಿದೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾತಿಯಾಧಾರಿತ ಅಂಕಿ-ಅಂಶ ಸಂಗ್ರಹಿಸಿದ್ದರು. ಅದರಂತೆ ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಅಂದರೆ ರಾಜ್ಯದ ಶೇ.16ಕ್ಕಿಂತಲೂ ಹೆಚ್ಚು ಜನರು ಮುಸ್ಲಿಮರು ಮತ್ತು ದಲಿತರ ಬಳಿಕ ಅತಿಹೆಚ್ಚು ಜನಸಂಖ್ಯೆಯಲ್ಲಿ ರಾಜ್ಯದಲ್ಲಿದ್ದಾರೆ. ಆದರೂ ಈ ಸಮುದಾಯ ಎಲ್ಲ ರಂಗಗಳಲ್ಲೂ ಹಿಂದುಳಿದೆ.
ಅಲ್ಪಸಂಖ್ಯಾತರಿಗಾಗಿ ಬಜೆಟ್ ನಲ್ಲಿ ಮೀಸಲಿಟ್ಟಂತಹ ಹಣ ಮುಸ್ಲಿಮರಿಗೆ ಎಷ್ಟು ಎಂಬುದು ನಿಖರವಾಗಿಲ್ಲ ಮತ್ತು ಈ ತನಕ ಬಜೆಟ್ ಆಧಾರಿತವಾಗಿ ಸಮುದಾಯ ಅಭಿವೃದ್ಧಿಗೊಳ್ಳದಿರುವ ಕಾರಣ ಮುಸಲ್ಮಾನರಿಗೆ ಪ್ರತ್ಯೇಕ ಪ್ರಾಧಿಕಾರ ಅಥವಾ ನಿಗಮ ರಚಿಸಲೇಬೇಕೆಂದು ಯುನಿವೆಫ್ ಕರ್ನಾಟಕ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.
ಈ ಕುರಿತು ಮಾತನಾಡಲು ಮುಖ್ಯಮಂತ್ರಿಗಳ ಜೊತೆ ನಿಯೋಗವನ್ನು ಭೇಟಿ ಮಾಡುವ ತೀರ್ಮಾನವನ್ನೂ ಯುನಿವೆಫ್ ಕರ್ನಾಟಕ ಕೈಗೊಂಡಿದೆ.
Kshetra Samachara
19/11/2020 09:06 am