ಮುಲ್ಕಿ: ಮುಲ್ಕಿ ಸಮೀಪದ ಪಡು ಬೈಲು ಎಂಬಲ್ಲಿ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಮಹಿಳೆಯನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ.
ಕಾರ್ನಾಡು ಪಡು ಬೈಲು ನಿವಾಸಿ ಶಾರದಾ (65) ತಮ್ಮ ಮನೆ ಸಮೀಪದ ಬಾವಿಗೆ ಗುರುವಾರ ಸಂಜೆ ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗಿದೆ. ಶಾರದಾ ಮುಲ್ಕಿಯ ನರ್ಸಿಂಗ್ ಹೋಂನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸಕ್ಕಿದ್ದು ಸಂಜೆ 7 ಗಂಟೆಯಾದರೂ ಆಸ್ಪತ್ರೆಗೆ ಕೆಲಸಕ್ಕೆ ಬರದಿದ್ದುದನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ಆತಂಕಗೊಂಡಿದ್ದರು. ಕೂಡಲೇ ಶಾರದಾ ಅವರ ತಮ್ಮ ಹರಿಪ್ರಸಾದ್‌ಗೆ ತಿಳಿಸಿದಾಗ ಅವರೆಲ್ಲ ಮನೆ ಕಡೆ ಧಾವಿಸಿದರು. ಆಗ ಮನೆ ಬಾಗಿಲು ತೆರೆದಿದ್ದು, ಕೂಡಲೇ ಹುಡುಕಾಟ ನಡೆಸಿದಾಗ ಶಾರದಾ ಅವರು ಬಾವಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಶಾರದಾ ಬಾವಿಯ ಒಳ ಬದಿಯ ರಿಂಗ್ ಬಳಿ ಸಿಲುಕಿಕೊಂಡು ಪ್ರಜ್ಞೆ ತಪ್ಪಿದ್ದರು. ಕೂಡಲೇ ಸ್ಥಳೀಯರಾದ ಶಿವರಾಮ್ ಕಿಶೋರ್, ವಿನೋದ್, ಹರಿಪ್ರಸಾದ್ ಮತ್ತಿತರರು ಸೇರಿಕೊಂಡು ಅವರನ್ನು ಬಾವಿಯಿಂದ ಮೇಲೆತ್ತಿದ್ದು, ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯನ್ನು ರಕ್ಷಿಸಿದ ಯುವಕರ ಕಾರ್ಯಾಚರಣೆ ಶ್ಲಾಘನೆಗೆ ಪಾತ್ರವಾಗಿದ್ದು, ಅಂತರ್ಜಾಲದಲ್ಲಿ ವಿಡಿಯೋ ವೈರಲ್ ಆಗಿದೆ. ಮಹಿಳೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
Kshetra Samachara
23/10/2020 05:56 pm