ಮುಲ್ಕಿ: ರಾ.ಹೆ. 66ರ ಮುಲ್ಕಿಯ ಕಾರ್ನಾಡ್ ಕ್ಷೀರಸಾಗರ ಕೊಕ್ಕರಕಲ್ಲು ಬಳಿ ಕುಸಿದ ರಾಷ್ಟ್ರೀಯ ಹೆದ್ದಾರಿಗೆ ತೇಪೆ ಮಾತ್ರ ಹಾಕಿದ್ದು ಇದೀಗ ಅಪಾಯಕಾರಿಯಾಗಿ ಗೋಚರಿಸುತ್ತಿದೆ ಎಂದು ಉದ್ಯಮಿ ನಾಗರಾಜ್ ಮುಲ್ಕಿ ಆತಂಕ ವ್ಯಕ್ತ ಪಡಿಸಿದ್ದಾರೆ.
ಕಳೆದ ತಿಂಗಳ ಹಿಂದೆ ಮುಲ್ಕಿ ಕ್ಷೀರಸಾಗರ ಬಳಿ ಹೆದ್ದಾರಿ ಏಕಾಏಕಿ ಕುಸಿತ ಕಂಡು ಬೃಹದಾಕಾರದ ರಂದ್ರ ಸೃಷ್ಟಿಯಾಗಿತ್ತು.
ಅಲ್ಲದೆ, ಈ ಹೆದ್ದಾರಿಗೆ ಹಳೆಯಂಗಡಿಯ ವಕೀಲ ಡೇನಿಯಲ್ ದೇವರಾಜ್ ಅವರ ಕಾರು ಬಿದ್ದು ಜಖಂಗೊಂಡಿತ್ತು. ಬಳಿಕ ಹೆದ್ದಾರಿ ಇಲಾಖೆ ತೇಪೆ ಕಾಮಗಾರಿ ನಡೆಸಿ ತಾತ್ಕಾಲಿಕವಾಗಿ ಹೆದ್ದಾರಿ ದುರಸ್ತಿಗೊಳಿಸಿತ್ತು.
ಆದರೆ, ಮತ್ತೆ ಹೆದ್ದಾರಿಯಲ್ಲಿ ಹಾಕಿದ ತಾತ್ಕಾಲಿಕ ತೇಪೆ ಕಾಮಗಾರಿ ಹಂತಹಂತವಾಗಿ ಕುಗ್ಗಿ ಹೋಗುತ್ತಿದ್ದು, ಹೆದ್ದಾರಿಯಲ್ಲಿ ವಾಹನಗಳು ಚಲಿಸುತ್ತಿರುವಾಗ ಭಯಾನಕ ಶಬ್ದ ಕೇಳಿ ಬರುತ್ತಿದೆ ಎಂದು ಸ್ಥಳೀಯ ನಾಗರಾಜ ಮುಲ್ಕಿ ಹೇಳಿದ್ದಾರೆ.
ಕಳೆದ ದಿನಗಳ ಹಿಂದೆ ಹೆದ್ದಾರಿಯಲ್ಲಿ ಬೃಹದಾಕಾರದ ರಂದ್ರ ಉಂಟಾಗುವಾಗ ಮುಲ್ಕಿ ನ.ಪಂ. ಮುಖ್ಯಾಧಿಕಾರಿ ಚಂದ್ರಪೂಜಾರಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ರಸ್ತೆ ದುರಸ್ತಿ ಮಾಡಲು ಸೂಚನೆ ನೀಡಿದ್ದರು.
ಆದರೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹೆದ್ದಾರಿ ಅಗೆದು ಸರಿ ಮಾಡುವುದರ ಬದಲು ತಾತ್ಕಾಲಿಕ ತೇಪೆ ಹಾಕಿದ್ದರಿಂದ ಭಾರಿ ಅಪಾಯದ ಸಾಧ್ಯತೆ ಇದೆ ಎಂದು ನಾಗರಾಜ ತಿಳಿಸಿದ್ದಾರೆ.
ಕೂಡಲೇ ಹೆದ್ದಾರಿ ಇಲಾಖೆ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ವಾಸ್ತವತೆ ಅರಿಯಬೇಕೆಂದು ಅವರು ಒತ್ತಾಯಿಸಿದ್ದಾರೆ.
Kshetra Samachara
23/10/2020 09:37 am