ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಒಡೆತನ ನಿವೇಶನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗೆ ಕೋರ್ಟ್ ತಡೆಯಾಜ್ಞೆ

ಮಂಗಳೂರು: ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಕಚೇರಿ ಕಟ್ಟಡಕ್ಕೆ ತಾಗಿಕೊಂಡಿರುವ ಸಂಘದ ಸ್ವಾಧೀನ ಮತ್ತು ಒಡೆತನಕ್ಕೆ ಸೇರಿರುವ ಖಾಲಿ ನಿವೇಶನದಲ್ಲಿ ಸಿಟಿ ಸರ್ವೇ ಇಲಾಖೆಗೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಕಾಮಗಾರಿ ನಿಲ್ಲಿಸುವಂತೆ ಸಂಘ ಮಾಡಿದ ಮನವಿ ನಿರ್ಲಕ್ಷಿಸಿದ ಸ್ಮಾರ್ಟ್ ಸಿಟಿ ಯೋಜನೆ ಆಡಳಿತ ನಿರ್ದೇಶಕರ ವಿರುದ್ಧ ಪ್ರಾರಂಭದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸಂಘದ ವತಿಯಿಂದ ದೂರು ದಾಖಲಿಸಲಾಗಿತ್ತು.

ನಿರ್ಮಾಣ ಕಾರ್ಯ ನಿಲ್ಲಿಸುತ್ತೇವೆ ಎಂದು ಮೌಖಿಕವಾಗಿ ಭರವಸೆ ನೀಡಿದರೂ ಕಾಮಗಾರಿ ನಿಲ್ಲಿಸದ ಕಾರಣ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಆಡಳಿತ ನಿರ್ದೇಶಕರು, ಮಂಗಳೂರಿನ ನಗರ ಮಾಪನ ಕಚೇರಿ ಯೋಜನಾಧಿಕಾರಿ ಹಾಗೂ ರಾಜ್ಯವನ್ನು ಪ್ರತಿನಿಧಿಸಿ ದ.ಕ. ಜಿಲ್ಲಾಧಿಕಾರಿ ಅವರನ್ನು ಪ್ರತಿವಾದಿಗಳಾಗಿ ಕಾಣಿಸಿ ಸಂಘದ ನಿವೇಶನದಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಮಗಾರಿ ನಡೆಸದಂತೆ ಶಾಶ್ವತ ನಿರ್ಬಂಧಕಾಜ್ಞೆ ನೀಡುವಂತೆ ಪ್ರಾರ್ಥಿಸಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸಂಘದ ವತಿಯಿಂದ ದಾವೆ ಹೂಡಲಾಗಿತ್ತು.

ಕೋರ್ಟ್ ಇಂದು ಆದೇಶ ಹೊರಡಿಸಿದ್ದು ಪ್ರತಿವಾದಿಗಳು, ಅವರ ಸೇವಕರು ಹಾಗೂ ಪ್ರತಿನಿಧಿಗಳು ಯಾರೂ ಸಂಘದ ಒಡೆತನಕ್ಕೆ ಒಳಪಟ್ಟ ನಿವೇಶನ ಪ್ರವೇಶಿಸಿ ಅಕ್ರಮವಾಗಿ ಯಾವುದೇ ಕಾಮಗಾರಿ ನಡೆಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಜೆ.ಸಿ.ಬಿ. ಯಂತ್ರದ ಮುಖಾಂತರ ಜಮೀನು ಸಮತಟ್ಟು ಮಾಡುವ ಕೆಲಸ ಮುಗಿಸಿದ್ದು ಪಿಲ್ಲರ್ ಅಳವಡಿಸಲು ಗುಂಡಿ ತೋಡುವ ಕೆಲಸ ಪ್ರಾರಂಭವಾಗಿತ್ತು .

ಮಂಗಳೂರಿನ ಹೃದಯ ಭಾಗದಲ್ಲಿ ಮಿನಿ ವಿಧಾನಸೌಧದ ಪಕ್ಕದಲ್ಲಿ ಸಂಘ 45 ಸೆನ್ಸ್ ಜಮೀನನ್ನು ಹೊಂದಿದ್ದು, ಹತ್ತು ವರ್ಷಗಳ ಹಿಂದೆ ನೂರು ವರ್ಷಗಳಿಗೂ ಹಿಂದಿನ ಇತಿಹಾಸ ಹೊಂದಿರುವ ಸೂಟರ್ ವಾಚನಾಲಯ ಮತ್ತು ರಾಜಾರಾಮ್ ಬ್ಲಾಕ್ ಇದ್ದ ಎನ್.ಜಿ.ಒ. ಕಟ್ಟಡದ ಭಾಗ ಕೆಡವಿ ಈ ಸ್ಥಳದಲ್ಲಿ ಸಿಟಿ ಸರ್ವೇ ಇಲಾಖೆಯ ಕಚೇರಿ ಕಟ್ಟಡ ನಿರ್ಮಾಣವಾಗಿತ್ತು.

ಇತ್ತೀಚೆಗೆ ಸಂಘದ ಕಾರ್ಯಕಾರಿ ಸಮಿತಿಯ ಅನುಮತಿ ಇಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸಂಘದ ಒಡೆತನದ ಜಮೀನಿನಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆದಿದೆ.

ನೂರು ವರ್ಷ ಪೂರೈಸಿ ಶತಮಾನೋತ್ಸವ ಆಚರಣೆಯ ಈ ವರ್ಷದಲ್ಲಿ ಸಂಘದ ಹಲವು ಹಿರಿಯರ ನಿಸ್ವಾರ್ಥ ತ್ಯಾಗ, ಸಮರ್ಪಣಾ ಭಾವದ ಸೇವೆಯಿಂದ ಪಡೆದಿರುವ ಕೋಟ್ಯಂತರ ರೂ. ಬೆಲೆ ಬಾಳುವ ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಈ ಜಮೀನನ್ನು ಬಲವಂತವಾಗಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಾಗಿ ವಶ ಪಡಿಸಲು ಪ್ರಯತ್ನಿಸಿರುವುದು ವಿಷಾದನೀಯ.

ಸಂಘದ ಒಡೆತನದ ಆಸ್ತಿ ರಕ್ಷಿಸುವ ಜವಾಬ್ದಾರಿ ಆಡಳಿತ ಮಂಡಳಿಯದ್ದಾಗಿದೆ. ಸಂಘದ ಜಮೀನನ್ನು ಯಾವುದೇ ಅತಿಕ್ರಮಣತೆಯಿಂದ ರಕ್ಷಿಸುವ ನಿಟ್ಟಿನಲ್ಲಿ ಶಾಶ್ವತ ನಿರ್ಬಂಧಕಾಜ್ಞೆ ದಾವೆ ಹೂಡಲಾಗಿದ್ದು ಕೋರ್ಟ್ ಮುಂದಿನ ವಿಚಾರಣೆ ದಿನಾಂಕದ ವರೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

Edited By : Vijay Kumar
Kshetra Samachara

Kshetra Samachara

16/10/2020 09:53 pm

Cinque Terre

12.35 K

Cinque Terre

0

ಸಂಬಂಧಿತ ಸುದ್ದಿ