ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ಹುಂಬಾಜೆ, ಪಿಲಿಕಳ ಪರಿಸರದಲ್ಲಿ ಮರಿಯಾನೆ ಸಹಿತ ಮೂರು ಕಾಡಾನೆಗಳು ಗದ್ದೆ, ತೋಟಗಳಲ್ಲಿ ರಾತ್ರಿ ಸಂಚರಿಸಿದ್ದರಿಂದ ಹಾನಿಯಾಗಿದೆ.
ಹುಂಬಾಜೆ ನಿವಾಸಿ ತುಂಗಯ್ಯ ಗೌಡ ಅವರ ಅರ್ಧ ಎಕ್ರೆ ಗದ್ದೆಯಲ್ಲಿ ಆನೆಗಳು ಸಂಚರಿಸಿದ್ದು ನೆಟ್ಟಿರುವ ನೇಜಿ, ಬೆಳೆ ಹಾನಿಯಾಗಿದೆ. ಇಲ್ಲಿನ ಪರಿಸರದ ಅಡಿಕೆ, ತೆಂಗಿನ ತೋಟಗಳಲ್ಲೂ ಆನೆಗಳು ಸಂಚರಿಸಿದೆ. ಸದ್ಯ, ಆನೆಗಳು ಸಮೀಪದ ಕಾಡಿನಲ್ಲಿ ಬೀಡುಬಿಟ್ಟಿವೆ. ನೆರಿಯ ಆಸುಪಾಸು ಆಗಾಗ ಆನೆಗಳು ಪ್ರತ್ಯಕ್ಷವಾಗುತ್ತಿದ್ದು, ಕಳೆದ ಬಾರಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ಬಾಂಜಾರು ಮಲೆ ಸಮೀಪ ಆನೆಗಳು ಎದುರಾಗಿದ್ದವು. ಈವರೆಗೆ ಹುಂಬಾಜೆ ಪ್ರದೇಶದಲ್ಲಿ ಕಾಲಿಡದ ಆನೆಗಳು ಮೊದಲ ಬಾರಿ ಸಂಚಾರ ನಡೆಸಿವೆ. ಒಂದು ಬಾರಿ ಕೃಷಿ ತೋಟದ ಬಾಳೆ ಇತ್ಯಾದಿ ಆಹಾರದ ಜಾಡು ಹಿಡಿದರೆ ಮತ್ತೆ ಮತ್ತೆ ದಾಳಿ ಇಡುವ ಸಾಧ್ಯತೆ ಇದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಉಪ ವಲಯಾರಣ್ಯಾಧಿಕಾರಿ ಯತೀಂದ್ರ ಹಾಗೂ ಅರಣ್ಯ ಇಲಾಖೆಯ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ತಿಳಿಸಿದ್ದಾರೆ.
Kshetra Samachara
10/01/2021 10:51 am