ಮಂಗಳೂರು: ವಿಮಾನಗಳು ಲ್ಯಾಂಡ್ ಆಗುವ ವೇಳೆ ಓವರ್ ಶೂಟ್ ಆಗುವಂತಹ ಅಪಾಯ ತಪ್ಪಿಸುವ ಇಂಜಿನಿಯರ್ಡ್ ಮೆಟೀರಿಯಲ್ಸ್ ಅರೆಸ್ಟರ್ ಸಿಸ್ಟಂ(ಇಮಾಸ್) ಅಳವಡಿಸದಿರುವ ಬಗ್ಗೆ ಸುಪ್ರೀಂ ಕೋರ್ಟ್ ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವಿವರಣೆ ನೀಡುವಂತೆ ನಿರ್ದೇಶಿಸಿದೆ.
ಮಂಗಳೂರು ಹಾಗೂ ಕೋಯಿಕೋಡ್ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳು ಲ್ಯಾಂಡ್ ಆಗುವಾಗ ಓವರ್‌ಶೂಟ್ ಆಗುವಂತಹ ಅಪಾಯ ತಪ್ಪಿಸುವ ಇಂಜಿನಿಯರ್ಡ್ ಮೆಟೀರಿಯಲ್ಸ್ ಅರೆಸ್ಟರ್ ಸಿಸ್ಟಂ(ಇಮಾಸ್) ಅಳವಡಿಸಿರಲಿಲ್ಲ.
ಈ ಸಂಬಂಧ ದೆಹಲಿಯ ನಿವೃತ್ತ ಅಧಿಕಾರಿಯೊಬ್ಬರು ಸುಪ್ರೀಂಕೋರ್ಟ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರಿದ್ದ ಏಕಸದಸ್ಯ ಪೀಠವು ವಿವರಣೆ ನೀಡುವಂತೆ ನಿರ್ದೇಶನ ನೀಡಿದೆ.
ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಆ.7ರಂದು ಹಾಗೂ ಮಂಗಳೂರಿನಲ್ಲಿ 2010ರ ಮೇ 22ರಂದು ವಿಮಾನ ಇಳಿಯುವಾಗ ದುರಂತ ಸಂಭವಿಸಿರುವುದನ್ನು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಟೇಬಲ್‌ಟಾಪ್ ರನ್‌ವೇಗಳಲ್ಲಿ ಇಮಾಸ್ ಇರುವುದು ಸುರಕ್ಷಿತ. ಇದನ್ನು 2008ರಲ್ಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ತಿಳಿಸಲಾಗಿತ್ತು, ಆದರೆ ಇದುವರೆಗೂ ಅದನ್ನು ಅಳವಡಿಸಿಲ್ಲ.
ವಿಶ್ವದ 125 ವಿಮಾನ ನಿಲ್ದಾಣಗಳಲ್ಲಿ ಇಮಾಸ್ ಅಳವಡಿಸಲಾಗಿದೆ. ಇಷ್ಟು ನಿರ್ಲಕ್ಷೃ ಹಾಗೂ ವಿಳಂಬ ವಹಿಸಿದ ಬಗ್ಗೆ ತನಿಖೆ ನಡೆಸುವಂತೆ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಲಾಗಿದೆ.
ಇಮಾಸ್ ಎಂದರೆ ರನ್‌ವೇ ಕೊನೆಯಲ್ಲಿ ಹಾಕಲಾಗುವ ಓಡುವ ವಿಮಾನದ ಗತಿಯನ್ನು ಕಡಿಮೆಗೊಳಿಸಬಲ್ಲ ವಸ್ತುಗಳ ಒಂದು ಪಟ್ಟಿಯಂತಹ ರಚನೆ.
ಚಕ್ರಗಳು ಮುಂದಕ್ಕೆ ಚಲಿಸಲಾಗದೇ ಹೂತು ಹೋಗಿ ನಿಲ್ಲುವಂಥ ಮೃದುವಾದ ಪದರ ಅಳವಡಿಸಲಾಗುತ್ತದೆ. ಇದರಿಂದಾಗಿ ವಿಮಾನ ಓವರ್‌ಶೂಟ್ ಆದರೂ ಕಣಿವೆಗೆ ಉರುಳಿ ದೊಡ್ಡ ದುರಂತವಾಗುವುದು ತಪ್ಪುತ್ತದೆ.
Kshetra Samachara
18/09/2020 06:24 pm