ಮಂಗಳೂರು: ಲೋಕೋಪಯೋಗಿ ಇಲಾಖೆಯ ಅನುದಾನದಡಿ 20 ಲಕ್ಷ ರೂ. ವೆಚ್ಚದಲ್ಲಿ ಬಂಗ್ರಕೂಳೂರು 16ನೇ ವಾರ್ಡ್ ಪಡ್ಡೋಡಿ ರಸ್ತೆ ಕಾಂಕ್ರೀಟಿಕರಣ ಮಾಡಲಾಗುವುದು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಅವರು ಶನಿವಾರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಭಾಗದಲ್ಲಿ ತಗ್ಗು ಪ್ರದೇಶವಿರುವುದರಿಂದ ಡಾಮರೀಕರಣ ಮಾಡಿದರೆ ರಸ್ತೆ ಉಳಿಯಲಾರದು. ಆದ್ದರಿಂದ ದೀರ್ಘ ಬಾಳಿಕೆಗಾಗಿ ಕಾಂಕ್ರೀಟಿಕರಣ ಮಾಡಲು ಯೋಜಿಸಿದೇವೆ ಎಂದರು.
* ಲೋಕೋಪಯೋಗಿ ಇಲಾಖೆ 4 ಕೋಟಿ ರೂ. ಬಿಡುಗಡೆ:
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಿಗೆ 4 ಕೋಟಿ ರೂ. ಬಿಡುಗಡೆಯಾಗಿದ್ದು, ತುರ್ತಾಗಿ ನಡೆಯಬೇಕಾಗಿರುವ ಕಾಮಗಾರಿಗಳನ್ನು ಗುರುತಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸಮರ್ಪಕ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
* ಸರೋಜಿನಿ ಮಹಿಷಿ ವರದಿ ಸಮರ್ಪಕ ಜಾರಿ: ಸ್ಥಳೀಯವಾಗಿ ಇರುವ ಕೈಗಾರಿಕೆಯಲ್ಲಿ ನಮ್ಮದೇ ಯುವಕರಿಗೆ ಉದ್ಯೋಗ ನೀಡುವಲ್ಲಿ ಸರೋಜಿನಿ ಮಹಿಷಿ ಅವರ ವರದಿ ಪ್ರಮುಖ ಅಸ್ತ್ರವಾಗಿದೆ. ಇದು ಕಟ್ಟು ನಿಟ್ಟಾಗಿ ಜಿಲ್ಲಾಮಟ್ಟಲ್ಲಿ ಜಾರಿಯಾಗಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದೇನೆ. 50ಕ್ಕಿಂತ ಅಧಿಕ ಉದ್ಯೋಗಿಗಳು ಇದ್ದಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗುತ್ತದೆ. ಸಿ ಮತ್ತು ಡಿ ಗ್ರೂಪ್ ಗಳಲ್ಲಿ ಶೇ. 100, ಬಿ ಗ್ರೂಪ್ ಗೆ ಶೇ. 85, ಎ ಗ್ರೂಪ್ ಗೆ ಶೇ.65, ಉದ್ಯೋಗ ನೀಡಬೇಕೆಂಬ ನಿಯಮವಿದೆ. ಇಲ್ಲಿನ ಬೃಹತ್ ಕಂಪನಿಗಳಲ್ಲಿ ಪ್ರತಿಭಾವಂತರಿಗೆ ಉದ್ಯೋಗ ದೊರಕಿದರೆ ಪ್ರತಿಭಾ ಪಲಾಯನವನ್ನು ದೂರ ಮಾಡಬಹುದು ಎಂದರು.
ಸ್ಥಳೀಯ ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ಮುಖಂಡರಾದ ಉಮೇಶ್ ಮಲರಾಯ ಸಾನ, ಹರಿಪ್ರಸಾದ್ ಶೆಟ್ಟಿ, ಅಶೋಕ್ ಕುಲಾಲ್,ಕಿರಣ್ ಕೋಟಿಯನ್,ರಾಜೇಶ್ ಸಂಕದ ಮನೆ,ರಮೇಶ್ ಶೆಟ್ಟಿ, ಚಂದ್ರಿಕಾ ಪ್ರಭಾಕರ್,ವಾಣಿ ಭಂಡಾರಿ,ಗಂಗಾಧರ್ ಕಿರೋಡಿಯನ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಬಂಗ್ರಕೂಳೂರು ಬಳಿ ಬಸ್ ನಿಲ್ದಾಣ ನಿರ್ಮಾಣ ಹಾಗೂ ಬಸ್ ನಿಲುಗಡೆಗೆ ಸ್ಥಳೀಯರು ಮನವಿ ಸಲ್ಲಿಸಿದರು.
Kshetra Samachara
07/02/2021 10:13 am