ಮಂಗಳೂರು: ಉಳ್ಳಾಲದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಆಕೆಯ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿರುವ ಎಸ್‌ಡಿಪಿಐ ಕಾರ್ಯಕರ್ತ ಸಿದ್ದೀಕ್ ಎಂಬಾತ ತಪ್ಪಿತಸ್ಥನಾಗಿದ್ದಲ್ಲಿ ಆತನಿಗೆ ಶಿಕ್ಷೆಯಾಗಲಿ ಎಂದು ಎಸ್ ಡಿಪಿಐ ಹೇಳಿದೆ.
ಆರೋಪ ಹೊತ್ತಿರುವ ಸಿದ್ದೀಕ್ ಎಸ್ ಡಿಪಿಐ ಪಕ್ಷದ ಅಧ್ಯಕ್ಷ ಎಂದು ಪತ್ರಿಕೆಯಲ್ಲಿ ವರದಿಯಾಗಿದ್ದು, ಆದರೆ ಆತ ಎಸ್‌ಡಿಪಿಐ
ಅಧ್ಯಕ್ಷನಲ್ಲ, ಕೇವಲ ಸಾಮಾನ್ಯ ಕಾರ್ಯಕರ್ತನಾಗಿದ್ದಾನೆ. ಎ.ಆರ್.ಅಬ್ಬಾಸ್ ಎಂಬವರು ಉಳ್ಳಾಲ ನಗರ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಈ ಬಗ್ಗೆ ಪಕ್ಷದಲ್ಲಿ ಆಂತರಿಕ ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ವಾಸ್ತವಾಂಶ ತಿಳಿಯಲು ಆತ ಇದುವರೆಗೂ ನಮ್ಮ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಒಂದು ವೇಳೆ ಆತ ತಪ್ಪಿತಸ್ಥನಾಗಿದ್ದರೆ ಆತ ನಮ್ಮ ಕಾರ್ಯಕರ್ತ ಎಂದುಕೊಂಡು ಯಾವುದೇ ಕಾರಣಕ್ಕೂ ಆತನನ್ನು ನಮ್ಮ ಪಕ್ಷ ಬೆಂಬಲಿಸುವುದಿಲ್ಲ. ಅಲ್ಲದೆ, ಯಾವುದೇ ರೀತಿಯ ಸಹಾಯವನ್ನೂ ಮಾಡುವುದಿಲ್ಲ. ಪೊಲೀಸ್ ಇಲಾಖೆಯೂ ಆತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.
ಅದೇ ರೀತಿ ಪೊಲೀಸ್ ಇಲಾಖೆ ಕೂಡ ಎರಡೂ ಕಡೆಯಿಂದಲೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಹಿಳೆಯರನ್ನು ಉಪಯೋಗಿಸಿಕೊಂಡು ಯುವಕರ ಫೋಟೊ ತೆಗೆದು ಹನಿಟ್ರ್ಯಾಪ್ ನಡೆಸಿ ಬ್ಲ್ಯಾಕ್ ಮೇಲ್ ನಡೆಸಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ತನಿಖೆ ನಡೆಸಬೇಕು. ಅಂತಹ ಷಡ್ಯಂತ್ರಕ್ಕೆ ಈತ ಬಲಿಯಾಗಿದ್ದಾನೆಯೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಎಸ್‌ಡಿಪಿಐ ತಿಳಿಸಿದೆ.
Kshetra Samachara
19/01/2021 09:47 pm