ಮೂಡುಬಿದಿರೆ: ಕೆಲವು ವರ್ಷಗಳ ಹಿಂದೆ ಪ್ರಸ್ತಾವಿತ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ನಿಡ್ಡೋಡಿ ಗ್ರಾಮದಲ್ಲಿ ಅಂತರ್ ಜಿಲ್ಲಾ ವಿದ್ಯುತ್ ಪ್ರಸರಣ ತಂತಿ ಎಳೆಯುವುದಕ್ಕೆ ಮಂಗಳವಾರ ಮತ್ತೊಮ್ಮೆ ಸರ್ವೇ ನಡೆದಿದೆ.
ಉಡುಪಿಯಿಂದ ದಕ್ಷಿಣ ಕನ್ನಡ ಮಾರ್ಗವಾಗಿ ಕೇರಳದ ಕಾಸರಗೋಡಿಗೆ 400 ಕೆ.ವಿ. ಡಿ.ಸಿ. ವಿದ್ಯುತ್ ಪ್ರಸರಣ ತಂತಿ ಎಳೆಯುವುದಕ್ಕೆ ಮಂಗಳವಾರ ಮಧ್ಯಾಹ್ನ ಮೂಡುಬಿದಿರೆಯ ನಿಡ್ಡೋಡಿಗೆ ಸರ್ವೇಗೆ ಬಂದ ಚೆನ್ನೈ ಮೂಲದ ಕಂಪೆನಿ ಸಿಬಂದಿಗೆ ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಿಡ್ಡೋಡಿಯಲ್ಲಿ ಅಪರಿಚಿತ ವ್ಯಕ್ತಿಗಳು ಸರ್ವೇ ನಡೆಸುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಮಾತೃಭೂಮಿ ಸಂರಕ್ಷಣಾ ಸಮಿತಿ ಸದಸ್ಯರು ಸ್ಥಳಕ್ಕಾಗಮಿಸಿ ಅಲ್ಲಿದ್ದ ಸಿಬಂದಿಯಿಂದ ಮಾಹಿತಿ ಕೇಳಿದರು.
ವಿದ್ಯುತ್ ತಂತಿ ಎಳೆಯುವುದಕ್ಕೆ 2020ರಲ್ಲಿ ಕೂಡ ಖಾಸಗಿ ಕಂಪೆನಿಯೊಂದರ ಸಿಬಂದಿ ನಿಡ್ಡೋಡಿಗೆ ಸರ್ವೇಗೆ ಬಂದಿದ್ದರು. ಆ ಸಂದರ್ಭದಲ್ಲೂ ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿ ಸದಸ್ಯರು ಹಾಗೂ ಊರವರು ಸರ್ವೇಗೆ ಅವಕಾಶ ನೀಡದೆ ವಾಪಸ್ ಕಳಿಸಿದ್ದರು.
Kshetra Samachara
12/01/2021 07:32 pm