ಮಂಗಳೂರು: ತುಳುನಾಡಿನ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ರೀತಿಯಲ್ಲಿ ದೈವಗಳ ಪೋಟೊ, ವೀಡಿಯೊಗಳನ್ನು ಚಿತ್ರವಿಚಿತ್ರ ರೀತಿಯಲ್ಲಿ ಎಡಿಟ್ ಮಾಡಿ ಅಸಂಖ್ಯಾತ ದೈವ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ನೋವು ಉಂಟು ಮಾಡಲಾಗುತ್ತಿದೆ ಎಂದು ಆರೋಪಿಸಿ "ಯುವ ತುಳುನಾಡ್ ಕುಡ್ಲ" ಸಂಘಟನೆ ಕಾನೂನಿನ ಸಮರ ಸಾರಿದೆ.
ದೈವಗಳ ಪೋಟೊಗಳನ್ನು ಅಸಭ್ಯವಾಗಿ ಎಡಿಟ್ ಮಾಡುವುದು, ದೈವಗಳ ಬಗ್ಗೆ ತಮ್ಮದೇ ಕಲ್ಪನೆಯಲ್ಲಿ ಚಿತ್ರ ಬಿಡಿಸುವುದು, ದೈವ ನರ್ತನಗಳ ವೀಡಿಯೊಗಳಿಗೆ ಸಿನಿಮಾ ಹಾಡುಗಳು, DJ ಹಾಡು ಹಾಕಿ ಎಡಿಟ್ ಮಾಡುವುದು, ಅಗತ್ಯವಿಲ್ಲದ ಭಂಗಿಯಲ್ಲಿ ದೈವದ ಫೋಟೊ ತೆಗೆಯುವುದು, ಸಂಧಿ, ಪಾಡ್ದನ, ಬೀರಗಳಲ್ಲಿ ಇಲ್ಲದ ಕಥೆ ಕಟ್ಟಿ ಅದಕ್ಕೆ ತಕ್ಕುದಾದ ವೀಡಿಯೊಗಳನ್ನು ಮಾಡಿ ನಂಬಿಕೆಗೆ ನೋವುಂಟು ಮಾಡುವ ಕೃತ್ಯಗಳು ನಡೆಯುತ್ತಿವೆ.
ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಸಾಮಾಜಿಕ ಜಾಲತಾಣಗಳ ಪೇಜ್, ಗ್ರೂಪ್, ಖಾತೆಗಳ ಮೇಲೆ ದೂರು ಸಲ್ಲಿಸಲಾಗಿದೆ.
ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಯುವ "ತುಳುನಾಡ್ ® ಕುಡ್ಲ" ಸಂಘಟನೆ ಮಂಗಳೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಸೈಬರ್ ಕ್ರೈಮ್ ಸ್ಟೇಷನ್ ಹಾಗೂ ಮಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ದೂರು ಸಲ್ಲಿಸಿದೆ.
ಈ ಸಂದರ್ಭ ಸಂಘಟನೆಯ ಅಧ್ಯಕ್ಷ ರೋಶನ್ ರೆನಾಲ್ಡ್, ಗೌರವಾಧ್ಯಕ್ಷ ಯಾದವ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಿತೇಶ್ ಡಿಸೋಜ, ಖಜಾಂಚಿ ರಕ್ಷಣ್ ಪೂಜಾರಿ, ಸಂಚಾಲಕ ಸನತ್, ಸದಸ್ಯರಾದ ಸಂತೋಷ್ ಶೆಟ್ಟಿ, ಸುಜಿತ್ ರಾಜ್ ಉಜಿರೆ ಉಪಸ್ಥಿತರಿದ್ದರು.
Kshetra Samachara
07/01/2021 09:18 am