ಮೂಡುಬಿದಿರೆ: ರಾಜ್ಯದಲ್ಲಿ ವಿದ್ಯಾಗಮ ಯೋಜನೆಯಡಿ ಪಾಠ ಮಾಡಿದ 80ಕ್ಕೂ ಅಧಿಕ ಶಿಕ್ಷಕರು ಕೊರೊನಾದಿಂದ ಮೃತಪಟ್ಟಿದ್ದಾರೆ. ಸರ್ಕಾರ ಕೊರೊನಾ ವಾರಿಯರ್ಸ್ ಮೃತಪಟ್ಟರೆ 30ಲಕ್ಷ ಪರಿಹಾರ ನೀಡುವುವಾಗಿ ಘೋಷಿಸಿದ್ದು ಯಾವ ಶಿಕ್ಷಕರಿಗೂ ಪರಿಹಾರ ಸಿಕ್ಕಿಲ್ಲ. ಈಗ ವಿದ್ಯಾಗಮ ಶಿಕ್ಷಕರನ್ನು ಕೊರೊನಾ ವಾರಿಯರ್ಸ್‍ನಿಂದ ಹೊರಗಿಟ್ಟು ಅನ್ಯಾಯ ಮಾಡಿದೆ. ಶಿಕ್ಷಕರು, ಪತ್ರಕರ್ತರನ್ನು ಕೊರೊನಾ ವಾರಿಯರ್ಸ್‍ಗೆ ಸೇರ್ಪಡೆಗೊಳಿಸಬೇಕು. ಮೃತಪಟ್ಟ ಎಲ್ಲಾ ಶಿಕ್ಷಕರ ಕುಟುಂಬಕ್ಕೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಆಗ್ರಹಿಸಿದ್ದಾರೆ.
ಸರ್ಕಾರದ ವಿದ್ಯಾಗಮ ಯೋಜನೆಯಡಿ ಪಾಠಮಾಡಿ ಕೊರೊನಾ ಸೋಂಕಿಗೊಳಗಾಗಿ ಮೃತಪಟ್ಟ ಶಿಕ್ಷಕಿ ಪದ್ಮಾಕ್ಷಿ ಅವರ ಮನೆಗೆ ಬೋಜೇಗೌಡ ಅವರು ಶುಕ್ರವಾರ ಭೇಟಿ ನೀಡಿ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು,ಪದ್ಮಾಕ್ಷಿ ಅವರ ಪತಿ ಶಶಿಕಾಂತ ಅವರೊಂದಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ, ಪಾವತಿ ಮತ್ತಿತರ ವಿಷಯಗಳ ಕುರಿತು ಚರ್ಚಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು ಪದ್ಮಾಕ್ಷಿ ಮೃತಪಟ್ಟು ಒಂದು ತಿಂಗಳು ಕಳೆದರೂ ಇನ್ನೂ ಆಸ್ಪತ್ರೆಗೆ ಮುಂಗಡವಾಗಿ ಕಟ್ಟಿದ ಹಣ 4.30ಲಕ್ಷ ರೂಪಾಯಿ ಮರುಪಾವತಿಯಾಗಿಲ್ಲ. ಈ ಮೊತ್ತವನ್ನು ಸಂತ್ರಸ್ತ ಕುಟುಂಬಕ್ಕೆ ಕೂಡಲೇ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ರಾಜಶ್ರೀ, ದ.ಕ.ಜಿಲ್ಲಾ ಹಿಂದಿ ಅಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ರಾಯಿ ರಾಜ್‍ಕುಮಾರ್, ಜಿಲ್ಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ಮಾರ್ಕ್
ಮಂಡೋನ್ಸಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/11/2020 10:58 am