ಮುಲ್ಕಿ: ಹಳೆಯಂಗಡಿ ಬಳಿ ಮಧ್ಯ ಚೇಳೈರು ಎಂಆರ್ ಪಿ ಎಲ್ ಕಾಲೊನಿ ಗ್ರಾಮ ಒಳಗೊಂಡ ಚೇಳೈರು ಗ್ರಾಪಂ ನ 'ನಮ್ಮ ಗ್ರಾಮ ನಮ್ಮ ಯೋಜನೆ' ವಿಶೇಷ ಗ್ರಾಮಸಭೆ ಚೇಳೈರು ಎಂಆರ್ ಪಿಎಲ್ ಕಾಲೊನಿ ಸಮುದಾಯ ಭವನದಲ್ಲಿ ನಡೆಯಿತು.
ಮಧ್ಯ ಗ್ರಾಮ ಹಾಗೂ ಚೇಳೈರು ಗ್ರಾಮದ ಹೆಚ್ಚಿನ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ ಮತ್ತು ರಸ್ತೆ ಬದಿ ಹುಲ್ಲು ಬೆಳೆದಿದ್ದು ವಾಹನ ಸಂಚಾರಕ್ಕೆ ಅಡಚಣೆ ಆಗಿದೆ ಎಂದು ಗ್ರಾಮಸ್ಥರು ದೂರಿದರು.
ಇದಕ್ಕುತ್ತರಿಸಿದ ಪಿಡಿಒ ನಿತ್ಯಾನಂದ, ಈ ಹುಲ್ಲನ್ನು ಕತ್ತರಿಸಲು ಆಯಾಯ ಗ್ರಾಮದ ಗ್ರಾಮಸ್ಥರು, ಸಂಘ ಸಂಸ್ಥೆಗಳು ಶ್ರಮದಾನ ಮಾಡಿದರೆ ಉತ್ತಮ.
ನಮ್ಮ ಗ್ರಾಪಂ ಗೆ ಅದಾಯ ಕಡಿಮೆ ಇರುವುದರಿಂದ ಅತಿ ಅಗತ್ಯ ಕಂಡು ಬಂದಲ್ಲಿ ಹುಲ್ಲು ತೆಗೆಯುವ ವ್ಯವಸ್ಥೆ ಮಾಡುವ. ಚರಂಡಿ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಎಂದರು. ಚೇಳೈರು ಕಾಲೊನಿಗೆ ಪ್ರಾ. ಆ. ಕೇಂದ್ರ ಅಗತ್ಯವಿದ್ದು, ಸೂಕ್ತ ಒಳ ರಸ್ತೆಗಳಿಲ್ಲ, ಡಾಮರು ಕಿತ್ತು ಹೋಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ತಾಪಂ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಈ ಬಗ್ಗೆ ಶಾಸಕರ ಗಮನಕ್ಕೆ ತರುವುದಾಗಿ ತಿಳಿಸಿದರು.
ಮಧ್ಯ ಕುಲ್ಲಂಗಾಲು ಗುಡ್ಡೆಯಲ್ಲಿ ಜಿಪಂ ವತಿಯಿಂದ ಚರಂಡಿ ನಿರ್ಮಾಣ ಆಗಿದ್ದು, ಕಾಮಗಾರಿ ಕಳಪೆ ಮಟ್ಟದ್ದಾಗಿದೆ.
ನೀರು ಚರಂಡಿಯಲ್ಲಿ ಹೋಗದೆ ರಸ್ತೆ ಮೇಲೆ ಹೋಗುತ್ತಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿರುವಾಗ ಅಧಿಕಾರಿಗಳು ಕಾಮಗಾರಿ ಸರಿಯಾಗಿ ನಿರ್ಮಿಸುವಂತೆ ಸೂಚಿಸಬೇಕು ಹಾಗೂ ಸಂಬಂಧಿಸಿದ ಜಿಪಂ ಇಂಜಿನಿಯರ್ ಕಾಮಗಾರಿ ನೋಡದೆ ಕೇವಲ ಆಫೀಸ್ ನಲ್ಲಿ ಕುಳಿತು ಹೇಗೆ ಬಿಲ್ ಪಾಸ್ ಮಾಡಿದ್ದಾರೆ? ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದರು.
ಆಗ ಪಿಡಿಒ, ಮುಂದೆ ಈ ರೀತಿ ಆಗದಿರುವ ಹಾಗೆ ನೋಡಿಕೊಳ್ಳುವುದಾಗಿ ಹೇಳಿದರು. ಮಧ್ಯ ದೇವಸ್ಥಾನಕ್ಕೆ ಬರುವ ರಸ್ತೆಗೆ ಮತ್ತು ಸಾಯಿನಗರ ರಸ್ತೆಗೆ ಚರಂಡಿ ವ್ಯವಸ್ಥೆ ಆಗಬೇಕು ಎಂದು ಗ್ರಾಮಸ್ಥರು ಹೇಳಿದಾಗ ಪಿಡಿಒ ಉತ್ತರಿಸಿ, ಗ್ರಾಮದ ಅಭಿವೃದ್ಧಿ ಆಗಲು ಗ್ರಾಮಸ್ಥರ ಸಹಕಾರ ಅಗತ್ಯ.
ಸಕಾಲದಲ್ಲಿ ಮನೆ ತೆರಿಗೆ, ನೀರಿನ ಬಿಲ್ ಗ್ರಾಮಸ್ಥರು ಕಟ್ಟಿದರೆ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಬಹುದು. ಆದರೆ ಚೇಳೈರು ಗ್ರಾಪಂನಲ್ಲಿ ಸುಮಾರು 12 ಲಕ್ಷ ನೀರಿನ ಬಿಲ್ ಬಾಕಿ ಇದೆ.
ಬಾಕಿ ಇದ್ದವರ ನೀರಿನ ಸಂಪರ್ಕ ಕಡಿತ ಮಾಡಲು ನೋಟಿಸ್ ನೀಡಲಾಗಿದೆ. ಮುಂದೆ ಈ ಬಗ್ಗೆ ಪಂ. ವತಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು. ಗ್ರಾಮ ಕರಣಿಕ ನಿತಿನ್,ಜಿಲ್ಲಾ ಜಲಮಿಷನ್ ತಾಂತ್ರಿಕ ಸಂಯೋಜಕ ಪ್ರಸಾದ್,ಕೃಷಿ ಅಧಿಕಾರಿ ಬಶೀರ್,ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷರಾದ ಜಯಾನಂದ, ಪುಷ್ಪರಾಜ್ ಶೆಟ್ಟಿ, ಮಾಜಿ ಸದಸ್ಯರಾದ ಶಂಕರ ಶೆಟ್ಟಿ, ಯಶೋದಾ,ಪುಷ್ಪ, ರೇಖಾ,ಜಯಶ್ರೀ, ದಿನೇಶ್ ದೇವಾಡಿಗ ,ಚಂದ್ರಶೇಖರ್ ಹೆಬ್ಬಾರ್, ಗ್ರಾಮಸ್ಥರ ಪರವಾಗಿ ವೇಣು ವಿನೋದ್ ಶೆಟ್ಟಿ, ಗಂಗಾಧರ ಪೂಜಾರಿ,ಬಾಬು ದೇವಾಡಿಗ,ಪುಷ್ಪರಾಜ್ ಕುಲಾಲ್,ಪ್ರಶಾಂತ್ ಶೆಟ್ಟಿ,ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
11/11/2020 10:30 am