ಮಂಗಳೂರು: ನಗರದಲ್ಲಿ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಳವಾಗುತ್ತಿದ್ದು, ಪರಿಣಾಮ ಮಂಗಳೂರಿನಲ್ಲಿ ಆತಂಕ ಸೃಷ್ಟಿಯಾಗಿದೆ.
ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಕೇರಳ ವಿದ್ಯಾರ್ಥಿಗಳು ತಪಾಸಣೆ ನಡೆಸದೆ ಬಂದಿರುವುದರಿಂದ, ಕಾಲೇಜು, ಹಾಸ್ಟೆಲ್ ಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವ ಕಾರಣ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಒಂದೇ ಆಡಳಿತ ವ್ಯವಸ್ಥೆಗೆ ಒಳಪಟ್ಟ ನಗರದ ಸಿಟಿ ನರ್ಸಿಂಗ್ ಕಾಲೇಜು ಹಾಗೂ ರುಕ್ಮಿಣಿ ಶೆಟ್ಟಿ ಮೆಮೋರಿಯಲ್ ನರ್ಸಿಂಗ್ ಕಾಲೇಜುಗಳಲ್ಲಿಯೇ ಬರೋಬ್ಬರಿ 78 ಮಂದಿ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅದೇ ರೀತಿ ಮಸೂದ್ ನರ್ಸಿಂಗ್ ಕಾಲೇಜಿನಲ್ಲಿ ಆರು ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದಿದೆ.
ಮೊದಲ ಬ್ಯಾಚ್ ನಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಆರ್ ಟಿಪಿಸಿಆರ್ ತಪಾಸಣೆ ನಡೆಸಿದ್ದರು. ಆದರೆ ಎರಡನೇ ಬ್ಯಾಚ್ ನ ಅನೇಕ ವಿದ್ಯಾರ್ಥಿಗಳು ಕೊರೊನಾ ತಪಾಸಣೆ ನಡೆಸದಿರುವುದರಿಂದ ಈ ಆತಂಕ ತಲೆದೋರಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಇರಿಸಲಾಗಿದೆ. ಇದೀಗ ಆರೋಗ್ಯ ಇಲಾಖೆ ಕಾಲೇಜಿನ ಮೇಲೆ ಶೋಕಾಸ್ ನೋಟಿಸ್ ಜಾರಿ ಮಾಡಿ ಕಾಲೇಜನ್ನು ಕಂಟೋನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಿ ಆದೇಶಿಸಿದೆ.
Kshetra Samachara
04/01/2021 06:18 pm