ಮಂಗಳೂರು: ಬ್ರಿಟನ್ ನಲ್ಲಿ ಕೊರೊನಾ ಮಾದರಿಯ ಎರಡನೇ ಅಲೆ ಎದ್ದಿದ್ದು, ಎಲ್ಲ ರಾಷ್ಟ್ರಗಳು ಮುನ್ನೆಚ್ಚರಿಕೆ ವಹಿಸಿವೆ.
ಇದೇ ವೇಳೆ ಬ್ರಿಟನ್‌ನಿಂದ ಮಂಗಳೂರಿಗೆ 56 ಮಂದಿ ಆಗಮಿಸಿದ್ದು, ದ.ಕ. ಜಿಲ್ಲೆಯಲ್ಲಿ ಕೊರೊನಾದ 2ನೇ ಅಲೆ ಭೀತಿ ಹುಟ್ಟಿಸಿದೆ.
ಬ್ರಿಟನ್ ಸಹಿತ ಹಲವು ದೇಶಗಳಿಂದ ಭಾರತೀಯರು ವಾಪಸಾಗುತ್ತಿದ್ದು, ಮಂಗಳೂರಿಗೂ 56 ಮಂದಿ ಬಂದಿದ್ದಾರೆ. ಇವರೆಲ್ಲರೂ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್‌ನೊಂದಿಗೆ ತಾಯ್ನಾಡು ಪ್ರವೇಶಿಸಿದ್ದಾರೆ. ಎಲ್ಲರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಬ್ರಿಟನ್ ಏರ್‌ವೇಸ್, ಇಂಡಿಯನ್ ಏರ್ ಲೈನ್ಸ್ ಸಹಿತ ವಿವಿಧ ವಿಮಾನ ಯಾನ ಸೇವಾ ಸಂಸ್ಥೆಗಳ ಮೂಲಕ ಪ್ರಯಾಣಿಸಿದ್ದಾರೆ. ಡಿ.7ರಿಂದ ಇಲ್ಲಿಯವರೆಗೆ 56 ಮಂದಿ ಬಂದಿದ್ದಾರೆ. ಡಿ.21ರಂದೇ 15 ಮಂದಿ ಮಂಗಳೂರು ತಲುಪಿದ್ದಾರೆ. ಇವರೆಲ್ಲರೂ ಬೆಂಗಳೂರು ಮೂಲಕ ಮಂಗಳೂರಿಗೆ ಬಂದವರಾಗಿದ್ದಾರೆ ಎಂದರು.
ಈಗಾಗಲೇ ಮೂವರನ್ನು ಸಂಪರ್ಕಿಸಲಾಗಿದ್ದು, ಡಿ.23ರಂದು ಬೆಳಗ್ಗೆ 9 ಗಂಟೆಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಬೆಳಗ್ಗೆ 11 ಗಂಟೆಯೊಳಗ ಪರೀಕ್ಷೆ ಮುಗಿಯಲಿದೆ. ಸಂಜೆ 5ರಿಂದ 6 ಗಂಟೆಯೊಳಗೆ ವರದಿ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ವಿದೇಶದಿಂದ ಮಂಗಳೂರಿಗೆ ಆಗಮಿಸಿದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ವ್ಯಾಪಕ ಪರಿಶ್ರಮ ಪಡಲಾಗುತ್ತಿದ್ದು, ಈಗಾಗಲೇ ಮೂವರು ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ.
ಮಂಗಳೂರಿಗೆ ಆಗಮಿಸಿದ ಎಲ್ಲರನ್ನೂ ಸಂಪರ್ಕಿಸಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗುವುದು ಎಂದರು.
ತಾಯ್ನಡಿಗೆ ವಾಪಸಾಗುವ ಎಲ್ಲ ಪ್ರಯಾಣಿಕರನ್ನು ಮತ್ತೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುವುದು. 14 ದಿನಗಳ ಕ್ವಾರಂಟೈನ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲೆಯ ಜನತೆ ಯಾವುದೇ ರೀತಿ ಭಯ ಪಡುವ ಅಗತ್ಯವಿಲ್ಲ ಎಂದು ಡಿಎಚ್‌ಒ ತಿಳಿಸಿದ್ದಾರೆ.
Kshetra Samachara
22/12/2020 10:54 pm