ಮೂಡುಬಿದಿರೆ: ಈ ಕೊರೊನಾ ಕಾಲದಲ್ಲಿ " ಮಾಸ್ಕ್, ಅಂತರ ಮರೆತು ಮೈಮರೆಯಬೇಡಿ" ಎಂಬ ಸಂದೇಶದೊಂದಿಗೆ ಈ ಬಾರಿ ಬೃಹದಾಕಾರದ ಕ್ರಿಸ್ಮಸ್ ನಕ್ಷತ್ರ ತಯಾರಾಗಿದೆ.
ಕಳೆದ 8 ವರ್ಷಗಳಿಂದ ಒಂದಿಲ್ಲೊಂದು ಸಾಮಾಜಿಕ ಸಂದೇಶಗಳ ಮೂಲಕ ಗಮನ ಸೆಳೆಯುತ್ತಿರುವ ಶಿರ್ತಾಡಿಯ ಲೈಫ್ ಸೇವಾ ಸಂಸ್ಥೆ ಈ ಬಾರಿ ವಿಶಿಷ್ಟ ಹಾಗೂ ಪರಿಸರ ಸಹ್ಯ ನಕ್ಷತ್ರದ ಮೂಲಕ ಗಮನ ಸೆಳೆದಿದೆ.
ಕೊರೊನಾ ಜಾಗೃತಿ ಜೊತೆಗೆ ಮಾಸ್ಕ್ ಹಾಗೂ ದೈಹಿಕ ಅಂತರದ ಪ್ರಾಮುಖ್ಯತೆ ವಿವರಿಸುವ ಈ ನಕ್ಷತ್ರವನ್ನು ಸಂಪೂರ್ಣ ನೈಸರ್ಗಿಕವಾಗಿ ರಚಿಸಲಾಗಿದೆ.
ಬಿದಿರು ಹಾಗೂ ಬಟ್ಟೆ ಮಾಸ್ಕ್, ಮೈದಾ ಹಿಟ್ಟು ಬಳಸಲಾಗಿದ್ದು, ಸ್ಯಾನಿಟೈಸರ್ ಹಾಗೂ ಕೊರೊನಾ ವೈರಸ್ ಆಕೃತಿಯನ್ನು ನಕ್ಷತ್ರದಲ್ಲಿ ಸೇರಿಸಲಾಗಿದೆ.
13 ಅಡಿ ಉದ್ದ ಹಾಗೂ 12 ಅಡಿ ಅಗಲವಿರುವ ಈ ನಕ್ಷತ್ರವನ್ನು ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್ ಆವರಣದಲ್ಲಿರುವ ಬೃಹತ್ ಬಾದಾಮಿ ಮರಕ್ಕೆ ನೇತುಹಾಕಿ ಪ್ರದರ್ಶನಕ್ಕೆ ಇಡಲಾಗಿದೆ.
ನಕ್ಷತ್ರದ ಒಟ್ಟು ತೂಕ 30 ಕೆ.ಜಿ.ಯಿದ್ದು, 20 ಕೆ.ಜಿ. ಬಿದಿರು, 160 ಅಡಿ ಬಿಳಿ ಬಟ್ಟೆ, 40 ಮಾಸ್ಕ್, 5 ಹ್ಯಾಂಡ್ ಸ್ಯಾನಿಟೈಸರ್, 1200 ಗುಂಡುಸೂಜಿ ಬಳಸಿ ನಿರ್ಮಿಸಲಾಗಿದೆ.
ನಕ್ಷತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಮಧ್ಯಭಾಗದಲ್ಲಿ ಅಳವಡಿಸಿರುವ ಕೊರೊನಾ ಆಕೃತಿ ಗಮನ ಸೆಳೆಯುತ್ತಿದೆ.
ಶಿರ್ತಾಡಿಯ ಪ್ರಸನ್ನ ಜೋಯೆಲ್ ಸಿಕ್ವೇರಾ ತನ್ನ ಸ್ನೇಹಿತರಾದ ಯತೀಶ್ ಕುಲಾಲ್ ಶಿರ್ತಾಡಿ ಹಾಗೂ ನವೀನ್ ಶೆಟ್ಟಿ ಶಿರ್ತಾಡಿಯವರ ಜೊತೆಗೂಡಿ ಒಟ್ಟು 8 ದಿನಗಳ ಶ್ರಮದ ಮೂಲಕ ತಯಾರಿಸಿದ್ದು, ಸಮಾಜದಲ್ಲಿ ಆರೋಗ್ಯ ಭದ್ರತೆ ಹಾಗೂ ಜಾಗೃತಿ ಹರಡಬೇಕು ಎಂಬ ಉದ್ದೇಶ ಹೊಂದಿದ್ದಾರೆ.
"ಕೊರೊನಾ ಇನ್ನೂ ಮಾನವ ಜಗತ್ತಿನಿಂದ ಮರೆಯಾಗಿಲ್ಲ. ಹೀಗಿರುವಾಗ ಸಾಲು ಸಾಲು ಹಬ್ಬಗಳನ್ನು ಕಳೆದು ಇದೀಗ ವರ್ಷದ ಕೊನೆಯಲ್ಲಿ ಕ್ರಿಸ್ಮಸ್ ಸಂಭ್ರಮದಲ್ಲಿದ್ದೇವೆ.
ಆದರೆ, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದನ್ನು ಮರೆಯುತ್ತಿರುವ ಸಮಾಜಕ್ಕೆ ಸಂದೇಶ ನೀಡುವುದು ಈ ಬಾರಿಯ ನಕ್ಷತ್ರದ ಉದ್ದೇಶ. ಕಳೆದ 7 ವರ್ಷಗಳಲ್ಲಿ ನಕ್ಷತ್ರವನ್ನು ಸರ್ವಧರ್ಮ ಸ್ನೇಹಿತರ ಸಹಕಾರದೊಂದಿಗೆ ನಿರ್ಮಿಸಿದ್ದು, ಈ ಬಾರಿಯೂ ಯತೀಶ್ ಕುಲಾಲ್ ಹಾಗೂ ನವೀನ್ ಶೆಟ್ಟಿಯವರು ಕೈಜೋಡಿಸಿದ್ದಾರೆ.
ಈ ಬಾರಿಯ ನಕ್ಷತ್ರ ಸಂಪೂರ್ಣ ಪರಿಸರ ಸಹ್ಯ ವಸ್ತುಗಳಿಂದಲೇ ರಚಿಸಲಾಗಿದ್ದು, ಬಟ್ಟೆಯ ಮಾಸ್ಕ್ ಪೋಣಿಸಲಾಗಿದೆ. ನಕ್ಷತ್ರದ ನಡುವೆ ಕೊರೊನಾ ಆಕೃತಿ ಹಾಗೂ ಅದರ ಸುತ್ತಲೂ ಸ್ಯಾನಿಟೈಸರ್ ಅಳವಡಿಸಲಾಗಿದೆ.
ಮುಂಜಾಗರೂಕತೆಯಿಂದ ಒಳಿತು, ಮೈಮರೆವಿನಿಂದ ಕೆಡುಕು ಸಾಧ್ಯವೆಂಬುದು ಈ ಸಲದ ನಕ್ಷತ್ರದ ಸಂದೇಶ"
- ಪ್ರಸನ್ನ ಜೋಯೆಲ್ ಸಿಕ್ವೇರಾ
ನಕ್ಷತ್ರ ನಿರ್ಮಿಸಿದವರು.
.....
"ಸರ್ವಧರ್ಮ ಗಳ ನಡುವೆ ಸಹಬಾಳ್ವೆ, ಸೌಹಾರ್ದತೆಯ ವಾತಾವರಣ ಈ ಜಗತ್ತಿನ ಇಂದಿನ ಅನಿವಾರ್ಯತೆ. ನಾವೆಲ್ಲ ಜಾತಿ- ಧರ್ಮಗಳಾಚೆಗೂ ಮನುಷ್ಯರು ಎಂಬ ಮೂಲತತ್ವದ ಆಧಾರದಲ್ಲಿ ಜೊತೆಯಾಗಿ ನಕ್ಷತ್ರ ನಿರ್ಮಿಸಿದ್ದೇವೆ"
- ಯತೀಶ್ ಕುಲಾಲ್ ಶಿರ್ತಾಡಿ
.....
"ಕೊರೊನಾ ಅಪಾಯದ ಬಳಿಕ ನಮ್ಮಗಳ ನಡುವೆ ಯೋಚನೆಗಳು ಬದಲಾಗಬೇಕು. ಕ್ರಿಸ್ಮಸ್, ದೀಪಾವಳಿ, ರಂಝಾನ್ ಎಲ್ಲವೂ ನಮ್ಮಲ್ಲಿ ಸಂಭ್ರಮಕ್ಕೆ ಕಾರಣವಾಗಬೇಕು. ನಕ್ಷತ್ರ ತಯಾರಿ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತಾಗಬೇಕು ಎಂಬುದು ನಮ್ಮ ಉದ್ದೇಶ"
- ನವೀನ್ ಶೆಟ್ಟಿ
Kshetra Samachara
22/12/2020 12:35 pm