ಮುಲ್ಕಿ: ಮುಲ್ಕಿ ಬಸ್ ನಿಲ್ದಾಣ ಬಳಿಯ ಆಸ್ಪತ್ರೆಯಿಂದ ಬುಧವಾರ ಏಕಾಏಕಿ ರೋಗಿಯೊಬ್ಬರು ವಾರ್ಡ್ ಕೋಣೆಯಿಂದ ತಪ್ಪಿಸಿಕೊಂಡು ಹೊರ ಬಂದಿದ್ದು, ಮುಲ್ಕಿ ಮೀನು ಮಾರುಕಟ್ಟೆ ರಿಕ್ಷಾ ನಿಲ್ದಾಣದ ಬಳಿ ಪತ್ತೆಯಾಗಿದ್ದಾರೆ.
ರೋಗಿ ಕೈಯಲ್ಲಿ ಬ್ಯಾಂಡೇಜ್ ಇರುವುದನ್ನು ಗಮನಿಸಿದ ಪರಿಚಯಸ್ಥ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಚಿನ್ ಮಟ್ಟು ಸಂಶಯದಿಂದ ರೋಗಿಯ ಪೂರ್ವಾಪರ ವಿಚಾರಿಸಿದಾಗ ಮುಲ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೇಳದೆ ಕೇಳದೆ ಆಸ್ಪತ್ರೆಯಿಂದ ಹೊರ ಬಂದಿರುವುದಾಗಿ ತಿಳಿಸಿದ್ದಾರೆ.
ಕೂಡಲೇ ಸಚಿನ್ ಆಟೋ ಮೂಲಕ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು. ಬಳಿಕ ಆಸ್ಪತ್ರೆಯಲ್ಲಿರುವ ರೋಗಿ ತಪ್ಪಿಸಿಕೊಂಡ ಬಗ್ಗೆ ಸಿಬ್ಬಂದಿನ್ನು ವಿಚಾರಿಸಿದಾಗ ಆಸ್ಪತ್ರೆ ಸಿಬ್ಬಂದಿ ಉಡಾಫೆಯಾಗಿ ವರ್ತಿಸಿದ್ದು, "ರೋಗಿಗಳನ್ನು ಬೇಕಾದರೆ ಮನೆಯವರು ನೋಡಿಕೊಳ್ಳಬೇಕು, ನಮ್ಮ ಕರ್ತವ್ಯ ಅಲ್ಲ" ಎಂದೆಲ್ಲ ಮಾತನಾಡಿದಾಗ ಆಸ್ಪತ್ರೆಯಲ್ಲಿ ಜನ ಸೇರಿ ಮಾತಿನ ಚಕಮಕಿ ನಡೆದಿದೆ.
ಕೂಡಲೇ ಸ್ಥಳೀಯರು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆತ್ತಿಕೊಂಡಿದ್ದಾರೆ.
ಮಾನವೀಯತೆಯಿಂದ ರೋಗಿಯನ್ನು ಆಸ್ಪತ್ರೆಗೆ ಸೇರಿಸಿದರೆ ಸಿಬ್ಬಂದಿ ಅಮಾನವೀಯತೆಯಿಂದ ನಡೆದುಕೊಂಡ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದಾಗ ಕೂಡಲೇ ಸ್ಥಳಕ್ಕೆ ಆಗಮಿಸಿದ ವೈದ್ಯರು ಎಲ್ಲರನ್ನೂ ಸಮಾಧಾನ ಪಡಿಸಿದರು.
ಈ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಲ್ಕಿ ಮಟ್ಟು ಮೂಲದ ರೋಗಿ ಮಾತನಾಡಿ, ತನಗೆ ಕಾಯಿಲೆ ಗುಣವಾಗಿದ್ರೂ ವೈದ್ಯರು ಮತ್ತಷ್ಟು ದಿನ ಆಸ್ಪತ್ರೆಯಲ್ಲಿರುವಂತೆ ಸೂಚಿಸಿದ್ದು, ಕೊರೊನಾ ಸಮಯದಲ್ಲಿ ಹೆದರಿಕೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Kshetra Samachara
11/11/2020 02:37 pm