ಬಂಟ್ವಾಳ: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಎಂದು ಒತ್ತಾಯಿಸಿ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಧರಣಿ ಸೋಮವಾರ ನಡೆಯಿತು.
ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಧರಣಿನಿರತರನ್ನು ಭೇಟಿಯಾಗಿ ಮನವಿ ಸ್ವೀಕರಿಸಿದರು. ಇದೇ ವೇಳೆ ಮಾತನಾಡಿದ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಈಗಾಗಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆ ಸುಸಜ್ಜಿತವಾಗಿದ್ದು, ಮೂಲಸೌಕರ್ಯಗಳನ್ನು ಹೊಂದಿದೆ.
ಶಿಕ್ಷಣ ಮತ್ತು ಆರೋಗ್ಯ ಜನರ ಮೂಲಭೂತ ಹಕ್ಕಾಗಿದ್ದು, ಶಾಲೆ ಮತ್ತು ಆಸ್ಪತ್ರೆಗಳು ಸುಸಜ್ಜಿತವಾಗಿ ದೊರಕುವಂತೆ ಮಾಡುವುದು ತನ್ನ ಆದ್ಯತೆಯಾಗಿದೆ ಎಂದರು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಮುಖಂಡ ಮುನೀರ್ ಕಾಟಿಪಳ್ಳ, ಹೋಬಳಿ ಕೇಂದ್ರವೊಂದಕ್ಕೆ ನಲ್ವತ್ತು ಹಾಸಿಗೆಗಳ ಸಮುದಾಯ ಆಸ್ಪತ್ರೆ, ಪ್ರತಿ ತಾಲೂಕಿಗೊಂದರಂತೆ ನೂರು ಹಾಸಿಗೆಗಳ ಪೂರ್ಣ ಪ್ರಮಾಣದ ಆಸ್ಪತ್ರೆ, ಅದರ ಮೇಲ್ಗಡೆ ಸುಸಜ್ಜಿತ ಜಿಲ್ಲಾಸ್ಪತ್ರೆ ಅಗತ್ಯವಾಗಿದ್ದು, ಇದು ಎಲ್ಲ ಕಡೆಗಳಿಗೂ ಅನ್ವಯಿಸುವಂತೆ ಎಲ್ಲ ಶಾಸಕರಿಗೆ ಮನವಿ ಮಾಡುವ ಮೂಲಕ ಜನಾಗ್ರಹ ಹೋರಾಟವನ್ನು ಮಾಡುತ್ತಿದ್ದೇವೆ ಎಂದರು.
ಖಾಸಗಿ ಆಸ್ಪತ್ರೆಗಳ ನಿಯಂತ್ರಣವಾಗದೇ ಇದ್ದರೆ ಬಡವರು ತೊಂದರೆಗೆ ಒಳಗಾಗುತ್ತಾರೆ ಎಂದು ಕಾಟಿಪಳ್ಳ ವಿವರಿಸಿದರು. ವೆನ್ಲಾಕ್ ಅನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು.
ದ.ಕ.ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ಪೂರ್ಣ ಪ್ರಮಾಣದ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಬೇಕು. ಜನಸಂಖ್ಯೆಗೆ ಅನುಸಾರ ಪ್ರಾಥಮಿಕ ಸಮುದಾಯ ಆಸ್ಪತ್ರೆ ನಿರ್ಮಿಸಿ, ಖಾಲಿ ಇರುವ ವೈದ್ಯ, ಸಿಬ್ಬಂದಿ ಭರ್ತಿ ಮಾಡಬೇಕು. ಎಲ್ಲ ಎಂಟು ತಾಲೂಕುಗಳಲ್ಲಿ ಪೂರ್ಣ ಪ್ರಮಾಣದ ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆ ಇರಬೇಕು ಎಂದು ಒತ್ತಾಯಿಸಲಾಯಿತು.
Kshetra Samachara
19/10/2020 04:29 pm