ಸುರತ್ಕಲ್ ಎನ್ಐಟಿಕೆ ಟೋಲ್ ವಿರುದ್ಧ ಸಮಾನಮನಸ್ಕ ಸಂಘಟನೆಗಳು ಹಾಗೂ ವಿವಿಧ ಟೂರಿಸ್ಟ್ ಕಾರು ಚಾಲಕ ಹಾಗೂ ಮಾಲಕರ ಸಂಘಟನೆ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಆರಂಭವಾದ ಬೃಹತ್ ಪಾದಯಾತ್ರೆಗೆ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಮುಲ್ಕಿಯಲ್ಲಿ ಭವ್ಯವಾದ ಸ್ವಾಗತ ದೊರೆಯಿತು.
ಹೋರಾಟಕ್ಕೆ ಪೂರ್ಣ ಬೆಂಬಲ ನೀಡಿದ ಮುಲ್ಕಿ ತಾಲೂಕು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಪುತ್ರನ್ ಹಾಗೂ ಕಾರ್ಯದರ್ಶಿ ಗೋಪಿನಾಥ ಪಡಂಗ ಹಾಗೂ ಧನಂಜಯ ಮಟ್ಟು ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ಬಂದವರಿಗೆ ಶರಬತ್ ಹಾಗೂ ಲಾಡು ವಿತರಿಸಲಾಯಿತು.
ಈ ಸಂದರ್ಭ ಹೋರಾಟವನ್ನು ಬೆಂಬಲಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಕೂಡಲೇ ಅವೈಜ್ಞಾನಿಕ ಎನ್ಐಟಿಕೆ ಟೋಲ್ ರದ್ದುಪಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಪ್ರತಿಭಟನೆ ಬೆಂಬಲಿಸಿ ಗೋಪಿನಾಥ ಪಡಂಗ ಮಾತನಾಡಿ ಅಕ್ರಮ ಟೋಲ್ ವಿರುದ್ಧದ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಈ ಸಂದರ್ಭ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ, ಮಾಜಿ ಶಾಸಕ ಮೊಯ್ದಿನ್ ಬಾವ, ಪ್ರತಿಭಾ ಕುಳಾಯಿ, ಯೋಗೀಶ್ ಕೋಟ್ಯಾನ್, ಮಧು ಆಚಾರ್ಯ, ಇಕ್ಬಾಲ್ ಮುಲ್ಕಿ, ಜೀವನ್ ಶೆಟ್ಟಿ, ಮತ್ತಿತರು ಉಪಸ್ಥಿತರಿದ್ದರು. ಬಳಿಕ ಬೃಹತ್ ಪಾದಯಾತ್ರೆ ಹಳೆಯಂಗಡಿ ಸುರತ್ಕಲ್ ಕಡೆಗೆ ತೆರಳಿತು. ಬಳಿಕ ಗೋಪಿನಾಥ ಪಡಂಗ ನೇತೃತ್ವದಲ್ಲಿ ಸ್ಥಳದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
Kshetra Samachara
22/03/2022 12:11 pm