ಮಂಗಳೂರು: ಸರ್ಕಾರ ತೃತೀಯ ಲಿಂಗಿಗಳ ಅಭಿವೃದ್ಧಿಗೆ ಹಲವಾರು ಯೋಜನೆ, ಕಾರ್ಯಕ್ರಮ ಜಾರಿಗೆ ತಂದಿದೆ. ಈ ಸೌಲಭ್ಯದ ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎ.ಜಿ. ತಿಳಿಸಿದರು.
ಭಾನುವಾರ ಕದ್ರಿ ಬಾಲಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಂಗಳೂರು ವಕೀಲರ ಸಂಘ ಆಶ್ರಯದಲ್ಲಿ ನಡೆದ ದುರ್ಬಲ ವರ್ಗಗಳ ದಿನದ ಅಂಗವಾಗಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಕ್ಕುಗಳು ಮತ್ತು ಕಾನೂನಿನ ಬಗ್ಗೆ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ದೀಪಾ ವಿ. ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆ ಸಹಿತ ನಾನಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವುದರ ಜೊತೆಗೆ ಭರತನಾಟ್ಯಗಳಲ್ಲಿಯೂ ಸಹ ಸಾಧನೆ ಮಾಡಿರುವುದರ ಬಗ್ಗೆ ಉದಾಹರಣೆ ನೀಡಿ ಇತರರು ಸಹ ಇದೇ ರೀತಿ ಸಾಧನೆ ಮಾಡಲು ಮುಂದಾಗಬೇಕೆಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಕೆ.ಕರ್ಗಿ, ಮಂಗಳೂರು ಗ್ರಾಮಾಂತರ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಹೆಚ್ ವಿ., ಮಂಗಳೂರು ವಕೀಲರ ಸಂಘ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರು ಮಾಧುರಿ ಎಸ್., ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/11/2020 07:49 pm