ರಾಜ್ಯಮಟ್ಟದ ಕೃಷಿ ಮೇಳದ ಮೊದಲ ದಿನದ ಕಾರ್ಯಕ್ರಮ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಕೃಷಿ ಸಿರಿ-2022 ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಸಭಾ ಕಾರ್ಯಕ್ರಮವನ್ನು ತುಳಸಿ ಗಿಡಕ್ಕೆ ನೀರೆರೆದು ತುಳುನಾಡಿನ ಸಾಂಪ್ರದಾಯಿಕ ಬಲಿಂದ್ರ ಕಂಬಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಕೃಷಿ ಮೇಳ ಉದ್ಘಾಟಿಸಿ ಮಾತಾಡಿದ ಸಂಸದೆ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, "ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಕೃಷಿಗೆ ಹೆಸರುವಾಸಿಯಾಗಿತ್ತು. ನಮ್ಮ ಆಹಾರ, ತರಕಾರಿಯನ್ನು ನಾವೇ ಉತ್ಪಾದನೆ ಮಾಡುತ್ತಿದ್ದೆವು. ಆದರೆ ಈಗ ತಿರುಗಿ ನೋಡಿದರೆ ನಾವು ಒಂದು ಹಿಡಿ ಭತ್ತಕ್ಕಾಗಿ ಬೇರೆ ಜಿಲ್ಲೆಯನ್ನು ಅವಲಂಬನೆ ಮಾಡಿದರೆ ತರಕಾರಿಗಾಗಿ ಘಟ್ಟವನ್ನು ಆಶ್ರಯಿಸಿದ್ದೇವೆ. ನಮ್ಮ ಭತ್ತದ ಗದ್ದೆಯನ್ನು ಹಡಿಲು ಬಿಟ್ಟು ಕೃಷಿ ಲಾಭವಿಲ್ಲ ಎಂದು ಬೇರೆ ಉದ್ಯೋಗವನ್ನು ಅರಸಿಕೊಂಡೆವು. ಕಳೆದ ಎರಡು ವರ್ಷಗಳ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಊರಿಗೆ ವಾಪಾಸ್ ಆದ ಅನೇಕ ಕೃಷಿಕರು ಮತ್ತೆ ಹಡಿಲು ಗದ್ದೆಯಲ್ಲಿ ಕೃಷಿ ಚಟುವಟಿಕೆ ಕೈಗೊಂಡೆವು. ಇದು ಖುಷಿಯ ವಿಚಾರ. ಯುವಕರು ಮತ್ತೆ ಕೃಷಿಯತ್ತ ನೋಡುತ್ತಿರುವ ಈ ವೇಳೆಯಲ್ಲಿ ಯುವಕರಲ್ಲಿ ಕೃಷಿ ಮೇಳದಂತಹ ಕಲ್ಪನೆ ಹುಟ್ಟುವ ಮೂಲಕ ಇಂದಿಲ್ಲಿ ಸಾಕಾರಗೊಳ್ಳುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ರೈತರು ಸ್ವಾವಲಂಬಿಯಾಗಬೇಕು. ರೈತವರ್ಗ ಮತ್ತೆ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಬಯಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರು ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿಲ್ಲ. ಇದಕ್ಕಾಗಿ ಬೀಜ ಮತ್ತು ಗೊಬ್ಬರ ಖರೀದಿಗೆಂದು ವಾರ್ಷಿಕ 6 ಸಾವಿರ ರೂ. ಅನ್ನು ರೈತರ ಖಾತೆಗೆ ಜಮಾ ಮಾಡಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಇಸ್ರೇಲ್ ಮಾದರಿ ಕೃಷಿಗೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು..
Kshetra Samachara
12/03/2022 08:09 am