ಸರಕಾರ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದ ಬಳಿಕ ಅಲ್ಲಲ್ಲಿ ಕಾರ್ಯಾಚರಿಸುತ್ತಿದ್ದ ರಾತ್ರಿಶಾಲೆಗಳು ತೆರೆಮರೆಗೆ ಸಂದಿತು. ಆದರೆ ದೇಶದ ಮೊತ್ತಮೊದಲ ರಾತ್ರಿ ಪ್ರೌಢಶಾಲೆ ಮಂಗಳೂರಿನಲ್ಲಿ ಇಂದಿಗೂ ಜೀವಂತವಿದೆ.
1943 ಮಾರ್ಚ್ 15ರಂದು ಈ ನವಭಾರತ ರಾತ್ರಿ ಪ್ರೌಢಶಾಲೆಯು ತಲೆಯೆತ್ತಿತು. ಅಂದು ಉತ್ಸಾಹಿ ತರುಣರಾಗಿದ್ದ ಹಾಜಿ ಖಾಲಿದ್ ಮೊಹಮ್ಮದ್ ಎಲ್ಲರಿಗೂ ಶಿಕ್ಷಣ ಲಭ್ಯವಾಗಬೇಕೆಂಬ ಸಂಕಲ್ಪದಲ್ಲಿ ಈ ಶಾಲೆಯನ್ನು ತೆರೆದರು. ನಗರದ ಕಾರ್ ಸ್ಟ್ರೀಟ್ ಬಳಿಯಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಈಗಲೂ ಈ ಶಾಲೆ ಕಾರ್ಯಾಚರಿಸುತ್ತಿದೆ. ಒಂದು ಕಾಲದಲ್ಲಿ 300ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆಯಲ್ಲಿ ಇಂದು 25 - 30 ವಿದ್ಯಾರ್ಥಿಗಳಿದ್ದಾರೆ.
ಕೇವಲ ಐದು ವಿದ್ಯಾರ್ಥಿಗಳಿಗೆ ಕನ್ನಡ ಪಾಠವನ್ನು ಅಭ್ಯಾಸ ಮಾಡುವ ಮುಖೇನ ಈ ಶಾಲೆ ಆರಂಭವಾಯಿತು. ಬಳಿಕ ಹಗಲು ಉದ್ಯೋಗ ಮಾಡಿ ಕಲಿಯಲು ಆಸಕ್ತಿ ಇರುವವರು, ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದವರು, ಭಡ್ತಿಗಾಗಿ ಎಸ್ಎಸ್ಎಲ್ಸಿ ಪೂರೈಸಬೇಕೆಂಬ ಇಚ್ಚೆಯುಳ್ಳವರು ಈ ರಾತ್ರಿ ಪ್ರೌಢಶಾಲೆಗೆ ಬರಲಾರಂಭಿಸಿದರು. 2005ರಿಂದ ಉದ್ಯಮಿ ಡಾ.ವಿನಯ್ ಹೆಗ್ಡೆಯವರು ಶಿಕ್ಷಕರ ವೇತನದ ವೆಚ್ಚವನ್ನು ಭರಿಸುವ ಪರಿಣಾಮ ಶಾಲೆ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟದಿಂದ ಚೇತರಿಸುವಂತಾಗಿದೆ. ಅಲ್ಲದೆ ಅದೇ ವರ್ಷದಿಂದ ಇಲ್ಲಿ ಎಲ್ಲರಿಗೂ ಉಚಿತ ಶಿಕ್ಷಣ ಲಭ್ಯವಾಗುತ್ತಿದೆ.
ಇದೀಗ ಒಂದರಿಂದ ಹತ್ತನೇ ತರಗತಿವರೆಗೆ ಇಲ್ಲಿ ಟ್ಯೂಷನ್, ಯಕ್ಷಗಾನ, ಯೋಗ ತರಬೇತಿಯನ್ನು ನೀಡಲಾಗುತ್ತಿದೆ. ಪರಿಣಾಮ ಹಗಲು ಬೇರೆ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇಲ್ಲಿಗೆ ರಾತ್ರಿ ಕಲಿಯಲು ಬರುತ್ತಿದ್ದಾರೆ. 2023ಕ್ಕೆ ನವಭಾರತ ರಾತ್ರಿ ಪ್ರೌಢಶಾಲೆಯ ಸ್ಥಾಪಕ ಹಾಜಿ ಖಾಲಿದ್ ಮೊಹಮ್ಮದ್ ರ ಶತಮಾನದ ವರ್ಷ. ಅದೇ ರೀತಿ ಶಾಲೆಯು 80ನೇ ವರ್ಷವನ್ನು ಪೂರೈಸುತ್ತದೆ. ಈ ಸಂಭ್ರಮಾಚರಣೆಯ ಪರ್ವಕಾಲದಲ್ಲಿ ಪಿಯುಸಿ ತರಗತಿಯನ್ನು ತೆರೆಯಲು ಶಾಲಾ ಆಡಳಿತ ಚಿಂತನೆ ನಡೆಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಯಾವ ಮಟ್ಟದಲ್ಲಿ ಪ್ರಾಮುಖ್ಯತೆ ಇದೆ ಎಂಬುದು ಸ್ವಾತಂತ್ರ್ಯ ಪೂರ್ವ ಕಾಲದ ಈ ಶಾಲೆ ಇಂದಿಗೂ ಜೀವಂತವಾಗಿರುವುದೇ ಸಾಕ್ಷಿಯಲ್ಲವೇ.
ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು, ಪಬ್ಲಿಕ್ ನೆಕ್ಸ್ಟ್, ಮಂಗಳೂರು
PublicNext
14/06/2022 03:50 pm