ಮುಲ್ಕಿ:ಮಂದಿರಗಳು ಶಾಂತಿ ಸಮಾಧಾನಗಳನ್ನು ನೀಡುವ ಕೇಂದ್ರಗಳಾಗಿದ್ದು ದೇವರು ನಮ್ಮ ಅಭಿವೃದ್ಧಿಗಾಗಿ ನೀಡಿರುವ ಅತ್ಯುನ್ನತ ಕೊಡುಗೆಯಾಗಿದೆ. ಪರಸ್ಪರ ಶಾಂತಿ ಸೌಹಾರ್ದತೆಯ ಕೇಂದ್ರವಾಗಿರುವ ಮುಲ್ಕಿ ಬಪ್ಪನಾಡು ಗ್ರಾಮದಲ್ಲಿರುದ ಈ ಪೂಜಾ ಕೇಂದ್ರದಿಂದ ಜನರ ಕಷ್ಟ ಕಾರ್ಪಣ್ಯಗಳು ದೂರವಾಗಲಿ ಎಂದು ಮಂಗಳೂರು ಕೆಥೋಲಿಕ್ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ಡಾನಾ ಹೇಳಿದರು.
ಮೂಲ್ಕಿ ಬಪ್ಪನಾಡು ಗ್ರಾಮದಲ್ಲಿ ನವೀಕರಣಗೊಂಡ 400ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಮೇರಿಮಾತೆಯ ಪುಣ್ಯಸ್ಥಳ ಗಜನಿ ಚರ್ಚ್ ಉದ್ಘಾಟಿಸಿ, ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಮುಲ್ಕಿ ಚರ್ಚ್ ಧರ್ಮಗುರುಗಳಾದ ಫಾ. ಸಿಲ್ವೆಸ್ಟರ್ ಡಿಕೋಸ್ತಾ, ಸುಮಾರು 400ವರ್ಷ ಇತಿಹಾಸ ವಿರುವ ಈ ಪುಣ್ಯ ಕ್ಷೇತ್ರದಲ್ಲಿ ಎಲ್ಲಾ ಮತ ಧರ್ಮದ ಭಾಂದವರು ಪ್ರಾರ್ಥಿಸುತ್ತಾ ಬಂದಿರುವ ಪವಾಡ ಸ್ಥಳವಾಗಿದ್ದು ಎಲ್ಲರ ಸಹಕಾರದಿಂದ ಕ್ಷೇತ್ರ ನವೀಕರಣ ಗೊಂಡಿದೆ.
ಈ ಬಗ್ಗೆ ಕರ್ನಾಟಕ ಸರಕಾರ ,ಮುಲ್ಕಿ ನಗರ ಪಂಚಾಯಿತಿ ಹಾಗೂ ಭಕ್ತಾದಿಗಳ ಕೊಡುಗೆ ಮುಖ್ಯವಾಗಿದೆ ಎಂದರು.
ಈ ಸಂದರ್ಭ ಕ್ಷೇತ್ರದ ನವೀಕರಣಕ್ಕೆ ಸಹಕರಿಸಿದ ವ್ಯಕ್ತಿಗಳನ್ನು ಅಭಿನಂದಿಸಲಾಯಿತು.
ಅತಿಥಿಗಳಾಗಿ ಸುರತ್ಕಲ್ ಮದರ್ ತೆರೆಜಾ ವಲಯದ ವಲಯ ಗುರುಗಳಾದ ರೆ. ಪಾವ್ಲ್ ಪಿಂಟೋ, ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಶುಭಾಶ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಬಪ್ಪನಾಡು ವಾರ್ಡ್ ಸದಸ್ಯ ದಯಾವತಿ ಅರುಣ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಕಾರ್ಯದರ್ಶಿ ಜೋವಿನ್ ಡಿಸೋಜ, ಮಾಜಿ ಉಪಾಧ್ಯಕ್ಷೆ ಜೀನ್ ಮೋಲಿ ಡಿಸೋಜಾ, ಮಾಜಿ ಕಾರ್ಯದರ್ಶಿ ಪ್ರಕಾಶ್ ಮೊಂತೇರೋ ಉಪಸ್ಥಿತರಿದ್ದರು. ಓಸ್ವಲ್ಡ್ ಕೊರೆಯಾ ಸ್ವಾಗತಿಸಿದರು. ಹಿಲ್ಡಾ ಪುಟಾಡೋ, ಲವಿಟಾ ಡಿಸೋಜ, ಪ್ರದೀಪ್ ಫೆರಾಓ ನಿರೂಪಿಸಿದರು. ಜೋವಿನ್ ಡಿಸೋಜ ವಂದಿಸಿದರು.
Kshetra Samachara
16/03/2022 08:53 pm