ಮಂಗಳೂರು: ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದಿಂದ ಪ್ರಾರಂಭಗೊಂಡು ಶ್ರೀ ಮಹಾಮಾಯ ದೇವಸ್ಥಾನ ರಸ್ತೆ, ಡೊಂಗರಕೇರಿ, ನ್ಯೂ ಚಿತ್ರ ವೃತ್ತ ಮೂಲಕ ರಥಬೀದಿಯಿಂದ ದೇವಳದ ವರೆಗೆ ವಿಜೃಂಭಣೆಯಿಂದ ಜರುಗಿತು.
ದಿಗ್ವಿಜಯ ಯಾತ್ರೆಯ ದಾರಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ವೈದಿಕರಿಂದ ವೇದಘೋಷ , ಕೇರಳದ ಪ್ರಸಿದ್ಧ ಚೆಂಡೆ ವಾದನ, ಮಹಿಳಾ ಮಂಡಳಿಯವರಿಂದ ಭಜನೆ, ವಾದ್ಯಘೋಷ ಕಣ್ಮನ ಸೆಳೆಯಿತು.
ಆರಂಭದಲ್ಲಿ ಶ್ರೀಗಳಿಂದ ಸಂಸ್ಥಾನದ ಆರಾಧ್ಯ ಶ್ರೀ ವ್ಯಾಸ ರಘುಪತಿ ನರಸಿಂಹ ದೇವರ ದರ್ಶನದ ಬಳಿಕ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಶ್ರೀಗಳ ದಿಗ್ವಿಜಯ ಯಾತ್ರೆ ನೆರವೇರಿತು.
ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯವರಿಂದ ಶ್ರೀ ದೇವಳದ ಹಾಗೂ ಮಂಗಳೂರಿನ ಸಮಾಜ ಬಾಂಧವರ ಪರವಾಗಿ ಶ್ರೀಗಳಿಗೆ ಹಾರಾರ್ಪಣೆ ನಡೆಯಿತು. ತದನಂತರ ಊರ - ಪರವೂರ ಜಿಎಸ್ ಬಿ ದೇವಾಲಯಗಳು, ಭಜನಾ ಮಂಡಳಿಗಳ ಹಾಗೂ ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠದ ಪದಾಧಿಕಾರಿಗಳಿಂದ ಹಾರಾರ್ಪಣೆ ನಡೆಯಿತು.
ದೇವಳದ ಮೊಕ್ತೇಸರರಾದ ಸಿ. ಎಲ್ . ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಶಾಸಕ ಡಿ. ವೇದವ್ಯಾಸ್ ಕಾಮತ್ , ಜಿಎಸ್ ಬಿ ದೇವಸ್ಥಾನದ ಒಕ್ಕೂಟದ ಅಧ್ಯಕ್ಷ ಎಂ. ಜಗನ್ನಾಥ್ ಕಾಮತ್, ಕೊಚ್ಚಿನ್ ತಿರುಮಲ ದೇವಸ್ಥಾನದ ಮೊಕ್ತೇಸರರು ಮತ್ತು ಮುಂಬೈ, ದೆಹಲಿ, ಕೇರಳದಲ್ಲಿರುವ ದೇವಳಗಳ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.
Kshetra Samachara
13/02/2021 09:53 pm