ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಹೊರಡುವ ದಶಾವತಾರ ಯಕ್ಷಗಾನ ಮೇಳದ ಸೇವೆಯಾಟವನ್ನು ಕಟೀಲು ಕ್ಷೇತ್ರದಲ್ಲೇ ಮಾಡಿಸಲು ಇಚ್ಛಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರ್ಮಿಸಲಾದ ಎರಡನೆಯ ಯಕ್ಷಗಾನ ಚೌಕಿಯನ್ನು ಕಟೀಲ್ ಬಸ್ ನಿಲ್ದಾಣದ ಬಳಿ ಉದ್ಘಾಟಿಸಲಾಯಿತು.
ಈ ಸಂದರ್ಭ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ, ಅರ್ಚಕರಾದ ಆಸ್ರಣ್ಣ ಸಹೋದರರಾದ ಲಕ್ಷ್ಮೀನಾರಾಯಣ, ವೆಂಕಟರಮಣ, ಅನಂತಪದ್ಮನಾಭ, ಕಮಲದೇವಿ ಪ್ರಸಾದ, ಶ್ರೀಹರಿ ನಾರಾಯಣದಾಸ ಆಸ್ರಣ್ಣ, ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಯಕ್ಷ ಧರ್ಮಬೋಧಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ‍್ಯ, ಅತ್ತೂರುಬೈಲು ವೆಂಕಟರಾಜ ಉಡುಪ, ಕೊಡೆತ್ತೂರುಗುತ್ತು ಬಿಪಿನ್ ಪ್ರಸಾದ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಕೆ. ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ಯಕ್ಷಗಾನ ಮೇಳದಲ್ಲಿ ಆರು ಮೇಳಗಳಿದ್ದರೂ ಶ್ರೀ ಕ್ಷೇತ್ರದಲ್ಲೇ ಯಕ್ಷಗಾನ ಸೇವೆಯಾಟ ಮಾಡಿಸಲಿಚ್ಛಿಸುವ ಒಬ್ಬರು ಭಕ್ತರಿಗೆ ಮಾತ್ರ ರಥಬೀದಿಯಲ್ಲಿ ಅವಕಾಶ ನೀಡಲಾಗುತ್ತಿತ್ತು. ಇತರರು ಪರಿಸರದ ಸಭಾಭವನಗಳನ್ನು ಆಶ್ರಯಿಸಬೇಕಾಗುತ್ತಿತ್ತು. ಕೆಲವು ದಿನಗಳಲ್ಲಿ ಕಟೀಲು ಆಸುಪಾಸಿನಲ್ಲೇ ಮೂರ‍್ನಾಲ್ಕು ಸೇವೆಯಾಟಗಳು ನಡೆಯುವುದೂ ಇದೆ. ಇದೀಗ
ಕಟೀಲು ದೇವಳದ ಆಡಳಿತ ಬಸ್‌ನಿಲ್ದಾಣದಲ್ಲೇ ಇನ್ನೊಂದು ಯಕ್ಷಗಾನ ಸೇವೆಯಾಟಕ್ಕೆ ಅವಕಾಶ ಕಲ್ಪಿಸಿದ್ದು, ನೂತನ ವ್ಯವಸ್ಥಿತವಾದ ಚೌಕಿ ನಿರ್ಮಿಸಲಾಗಿದ್ದು, ಕಟೀಲು ದೇವಳದ ವಠಾರದಲ್ಲೇ ಎರಡು ಯಕ್ಷಗಾನ ಬಯಲಾಟಗಳನ್ನು ನೋಡುವ ಅವಕಾಶ ಸಿಗಲಿದೆ.
ದಿನಂಪ್ರತಿ ಅತಿ ಹೆಚ್ಚು ಪ್ರದರ್ಶನವಾಗುವ ಶ್ರೀ ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಲಲಿತೋಪಾಖ್ಯಾನ ಪ್ರಸಂಗಗಳನ್ನು ಹೊರತು ಪಡಿಸಿ, ಅನೇಕ ವೈವಿಧ್ಯಮಯ ಪೌರಾಣಿಕ ಪ್ರಸಂಗಗಳನ್ನು ನೋಡುವ ಅವಕಾಶ ಇಲ್ಲಿ ಸಿಗಲಿದೆ.
Kshetra Samachara
08/02/2021 10:26 am