ಮುಲ್ಕಿ: ಮುಲ್ಕಿ ಠಾಣೆ ವ್ಯಾಪ್ತಿಯ ಚಿತ್ರಾಪು ಕೆರೆಬಿಯನ್ ರೆಸಾರ್ಟ್ ನಲ್ಲಿ ಹೊಸ ವರ್ಷದಂದು ಶಾಂಭವಿ ಹೊಳೆಯಲ್ಲಿ ಈಜಾಡಲು ತೆರಳಿದ್ದ ಸುಬ್ರಹ್ಮಣ್ಯ ಸಮೀಪದ ಕಡಬ ಮೂಲದ ಕುಟುಂಬವೊಂದರ ನಾಲ್ವರನ್ನು ರಕ್ಷಿಸಿದ ಇಬ್ಬರು ಯುವಕರನ್ನು ಮುಲ್ಕಿ ಪೊಲೀಸ್ ಠಾಣೆ ವತಿಯಿಂದ ಸನ್ಮಾನಿಸಲಾಯಿತು.
ಈ ಕುಟುಂಬದ ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ನೀರಿನಲ್ಲಿ ಮುಳುಗುತ್ತಿದ್ದ ವಿಷಯ ತಿಳಿದ ಮಂತ್ರ ಸರ್ಫ್ ಕ್ಲಬ್ ತಂಡದ ಸದಸ್ಯ ಶಮಂತ್ ತನ್ನ ಕ್ಲಬ್‌ನ ಸಹಪಾಠಿ ನಿಹಾಲ್ ಜೊತೆಗೂಡಿ ನೀರಿಗೆ ಹಾರಿ ಮುಳುಗುತ್ತಿರುವ ವರನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಅವರ ಜೊತೆಗೆ ಇದ್ದ ಜಯರಾಮ ಗೌಡ ಎಂಬವರು ಮೃತಪಟ್ಟಿದ್ದರು. ನೀರಿನಲ್ಲಿ ಮುಳುಗುತ್ತಿರುವ ನಾಲ್ವರನ್ನು ಜೀವದ ಹಂಗು ತೊರೆದು, ರಕ್ಷಿಸಿದ ಶಮಂತ ಹಾಗೂ ನಿಹಾಲ್ ಅವರ ಸಾಹಸ ಕಾರ್ಯದ ವೀಡಿಯೊ ವೈರಲ್ ಆಗಿದ್ದು ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ನಾಲ್ವರ ಜೀವ ಉಳಿಸಿದ ಶಮಂತ್ ಹಾಗೂ ನಿಹಾಲ್ ಅವರನ್ನು ಮುಲ್ಕಿ ಠಾಣೆ ಇನ್ ಸ್ಪೆಕ್ಟರ್ ಕುಸುಮಾಧರ ನೇತೃತ್ವದಲ್ಲಿ ನಗದು ಪುರಸ್ಕಾರ ಸಹಿತ ಸನ್ಮಾನಿಸಲಾಯಿತು.
ಈ ಸಂದರ್ಭಎಸ್ಐ ವಿನಾಯಕ ತೋರಗಲ್, ದೇಜಪ್ಪ, ಎಎಸ್ಐ ಚಂದ್ರಶೇಖರ್, ಬಾಲಕೃಷ್ಣ ರೈ ಅಶೋಕ್, ಸಿಬ್ಬಂದಿ ಉಪಸ್ಥಿತರಿದ್ದರು. ವಿಶೇಷವೆಂದರೆ ರಕ್ಷಣೆ ಮಾಡಿ ಸಾಹಸ ಮೆರೆದ ಶಮಂತ್ ಅವರು ಅದೇ ದಿನ ಅಂದರೆ ಡಿ.31ರಂದು ರಾತ್ರಿ ತಮ್ಮ ವೈವಾಹಿಕ ಜೀವನದ ಸಂಗಾತಿಯನ್ನು ನಿಶ್ಚಿತಾರ್ಥವಾಗುವ ತಯಾರಿಯಲ್ಲಿದ್ದರೂ ಕೂಡ ಕೆಲವೇ ಗಂಟೆಗಳ ಮೊದಲು ಅಸಹಾಯಕರ ಧ್ವನಿಗೆ ಓ ಗೊಟ್ಟು ಅಪಾಯ ಲೆಕ್ಕಿಸದೆ ನೀರಿಗಿಳಿದು ಸಾಹಸ ಮೆರೆದಿದ್ದು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.
Kshetra Samachara
02/01/2021 11:26 pm