ಮೂಡುಬಿದಿರೆ: ಯಕ್ಷಗಾನ ಎನ್ನುವುದು ಕೇವಲ ಮನೋರಂಜನೆಯ ಕಲೆ ಮಾತ್ರವಲ್ಲ, ಅದೊಂದು ಸಂಸ್ಕಾರ ಕಲಿಸುವ ಕೇಂದ್ರ ಎಂದು ಮೂಡುಬಿದಿರೆಯ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ವಿದ್ಯಾಗಿರಿಯಲ್ಲಿ ನಡೆದ ಮಹಿಳಾ ಯಕ್ಷ ಸಂಭ್ರಮ - 2021ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತೆಂಕುತಿಟ್ಟಿನಲ್ಲಿ ಮಹಿಳಾ ಕಲಾವಿದರು ಸಾಮಾನ್ಯವಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಬಡಗಿನಲ್ಲಿ ಈ ಕೊರತೆಯಿದ್ದು ಯಕ್ಷಗಾನ ಅಕಾಡೆಮಿ ಈ ಕುರಿತಾಗಿ ವಿಶೇಷ ಪ್ರಯತ್ನ ನಡೆಸಿ ಮಹಿಳಾ ಕಲಾವಿದರನ್ನೂ ಪ್ರೋತ್ಸಾಹಿಸಬೇಕು ಎಂದರು.
ಕಾಲದ ಅಗತ್ಯಕ್ಕೆ ಸ್ಪಂದಿಸಿ ಯಕ್ಷಗಾನವೂ ಕೂಡ ಸಂಸ್ಕರಣೆಗೆ ಒಳಗಾಗುತ್ತದೆ. ಜೊತೆಗೆ ಕಲಾವಿದರಲ್ಲೂ ಸಂಸ್ಕಾರ ರೂಢಿಗೊಳ್ಳುತ್ತದೆ. ಆದ್ದರಿಂದಲೇ ಯಕ್ಷಗಾನ ಹಾಗೂ ಕಲಾವಿದರಿಗೆ ಸಮಾಜದಲ್ಲಿ ಅಮಿತವಾದ ಗೌರವ- ಸ್ಥಾನಮಾನ ಉಳಿದುಕೊಂಡಿದೆ ಎಂದರು.
ಮುಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಯಕ್ಷಗಾನ ಅಕಾಡೆಮಿಯ ಆರಂಭದ ಹಿಂದೆ ಪರಮ ಉದ್ದೇಶವಿದೆ. ಆದ್ದರಿಂದ ಅಕಾಡೆಮಿಯು ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಮಾತನಾಡಿ, ಎರಡು ದಿನದ ಮಹಿಳಾ ಯಕ್ಷ ಸಂಭ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ನಡೆದಿದೆ. ಕಲೆಗೆ ತವರು ನೆಲ ಎನ್ನಬಹುದಾದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆಸದ ಈ ಕಾರ್ಯಕ್ರಮದ ಸಮಯ ಪಾಲನೆ, ಕಲಾಚಾತುರ್ಯ ಈ ಎಲ್ಲ ದೃಷ್ಟಿಯಿಂದಲೂ ಯಕ್ಷಸಂಭ್ರಮ ಸಾರ್ಥಕ್ಯವಾಗಿ ಮೂಡಿಬಂದಿದೆ ಎಂದರು.
ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಬಲಿಪ ನಾರಾಯಣ ಭಾಗವತರು, ಯಕ್ಷಗಾನ ಸಂಘಟಕ ಶಾಂತರಾಮ ಕುಡ್ವ, ಯಕ್ಷದೇವ ಮಿತ್ರ ಕಲಾ ಮಂಡಳಿಯ ದೇವಾನಂದ ಭಟ್, ಯಕ್ಷಗಾನ ಪೋಷಕರಾದ ವಿದ್ಯಾ ರಮೇಶ್ ನಡಿಗುತ್ತು ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಎಚ್ .ಎಸ್. ಶಿವರುದ್ರಪ್ಪ ಸ್ವಾಗತಿಸಿದರು. ಸದಸ್ಯ ಸಂಚಾಲಕ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಸಮಾರೋಪ ನಂತರ ತೆಂಕುತಿಟ್ಟಿನ ಖ್ಯಾತ ಕಲಾವಿದೆಯರ ಕೂಡಾಟ 'ತೆಂಕುತಿಟ್ಟಿನ ಯಕ್ಷ ರಸಾಯನ' ನಡೆಯಿತು.
Kshetra Samachara
30/01/2021 08:43 pm