ಮುಲ್ಕಿ : ಕೊರೊನಾ ಸಂಕಷ್ಟದಿಂದಾಗಿ ಈ ವರ್ಷದ ನವರಾತ್ರಿ ಸಂದರ್ಭ ಯಾವುದೇ ಮೆರವಣಿಗೆ ನಡೆಯುವುದಿಲ್ಲ. ಕಾರ್ಯಕ್ರಮಗಳಿಗೆ ಸಂಬಂಧಿಸಿ ಎಕ್ಕಾರು, ಕೊಡೆತ್ತೂರು ಮತ್ತು ಕಟೀಲು ನವರಾತ್ರಿ ಸೇವಾ ಸಮಿತಿ ಪದಾಧಿಕಾರಿಗಳ ಸಭೆ ಎಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಯಿತು. ಆಯಾ ದಿನದ ಸೇವೆಯನ್ನು 9 ಹುಲಿವೇಷ, 1 ಸಿಂಹದ ವೇಷ, 2 ಕರಡಿ ವೇಷ ಧರಿಸಿ ಕಟೀಲು ದೇವರಿಗೆ ಸೇವೆ ಸಲ್ಲಿಸಲಾಗುವುದು. ಬೇರೆ ಯಾವುದೇ ವೇಷಗಳಿಗೆ ಅವಕಾಶವಿರುವುದಿಲ್ಲ. ಈ ವೇಳೆ ಮೆರವಣಿಗೆ ಇರುವುದಿಲ್ಲ. ಸೇವೆಯನ್ನು ಶ್ರೀ ಕ್ಷೇತ್ರ ಕಟೀಲಿಗೆ ನಡೆದುಕೊಂಡೇ ಹೋಗಿ ಸಮರ್ಪಿಸಲಾಗುವುದು.
ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಸೇವೆಯಲ್ಲಿ 2 ತಾಸೆ ಸೆಟ್, 1 ಬ್ಯಾಂಡ್ ಸೆಟ್, 1 ಸೆಟ್ ಊರ ಡೋಲು ಬಳಸುವುದು ಎಂದು ನಿರ್ಣಯಿಸಲಾಯಿತು. ವರ್ಷಂಪ್ರತಿ ಸೇವೆ ಮಾಡುವವರು ಹುಲಿ ವೇಷ ಹೊರಡುವ ಮನೆಯಲ್ಲಿರಿಸಿದ ಕಾಣಿಕೆ ಡಬ್ಬಿಯಲ್ಲಿ ಕಾಣಿಕೆ ಹಾಕಬಹುದು. ಅದನ್ನು ಆ ದಿವಸ ರಾತ್ರಿಯೇ ಕಟೀಲಮ್ಮನಿಗೆ ಪ್ರಾರ್ಥನೆ ಮಾಡಿ ಸಲ್ಲಿಸಲಾಗುವುದು.
ಹುಲಿ ವೇಷ ಸೇವೆ ಹಾಕಲು ಹಿರಿತನಕ್ಕೆ ಮೊದಲ ಪ್ರಾಶಸ್ತ್ಯ ಕೊಡಲಾಗುವುದು, ಅವಕಾಶ ಸಿಗದಿರುವ ವರ್ಷಂಪ್ರತಿ ಹುಲಿವೇಷ ಹಾಕುವವರು ಬಣ್ಣದ ತಿಲಕ ಹಾಕಿ ಬೆಳಿಗ್ಗೆ ಮತ್ತು ರಾತ್ರಿಯ ಪ್ರಾರ್ಥನೆಯಲ್ಲಿ ಪಾಲ್ಗೊಂಡರೆ ಉತ್ತಮ. ಹೀಗೆ ನಾನಾ ನಿರ್ಣಯ ತೆಗೆದುಕೊಳ್ಳ ಲಾಯಿತು.
ಕೊಡೆತ್ತೂರು ದೇವಿಪ್ರಸಾದ್ ಶೆಟ್ಟಿ, ಲೋಕಯ್ಯ ಸಾಲ್ಯಾನ್, ಗಣೇಶ್ ಶೆಟ್ಟಿ, ಹರೀಶ್ ಶೆಟ್ಟಿ ಸಾಂತ್ಯ, ವಿಜಯ ಶೆಟ್ಟಿ ಅಜಾರುಗುತ್ತು, ಕೇಶವ ಕಟೀಲು, ಪ್ರಕಾಶ್ ಕುಕ್ಯಾನ್, ಜಗದೀಶ್ ರಾವ್, ಸುದೀಪ್ ಅಮೀನ್, ಭರತೇಶ್ ಶೆಟ್ಟಿ, ಯೋಗೀಶ್, ರಾಜಶೇಖರ್ ಶೆಟ್ಟಿ, ಶ್ರೀಕಾಂತ್ ನಡ್ಯೋಡಿ, ವಿಕ್ರಮ್ ಮಾಡ, ಸತೀಶ್ ಶೆಟ್ಟಿ, ಕಿರಣ್ ಕುಮಾರ್ ಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
07/10/2020 12:50 pm