ಬಂಟ್ವಾಳ: ಕೇಪು ಶ್ರೀ ಉಳ್ಳಾಲ್ತಿ (ದುರ್ಗಾಪರಮೇಶ್ವರಿ) ಅಮ್ಮನವರ ಸನ್ನಿಧಿಯಲ್ಲಿ ನಡೆಯುವ ಕಾಲಾವಧಿ ಕಜಂಬು ಜಾತ್ರೆ ಡಿ.16ರಂದು ಆನುವಂಶಿಕ ಮೊಕ್ತೇಸರರಾದ ವಿಟ್ಲ ಅರಮನೆಯ ಬಂಗಾರು ಅರಸರ ಮುಂದಾಳುತ್ವದಲ್ಲಿ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಳ ಪ್ರಕಾರ ಕಾರ್ಯಕ್ರಮಗಳು ನಡೆಯಲಿದೆ ಎಂದು ಅರಮನೆಯ ಕೃಷ್ಣಯ್ಯ ಬಲ್ಲಾಳ್ ತಿಳಿಸಿದ್ದಾರೆ.
ಡಿ.15ರ ಧನು ಸಂಕ್ರಮಣದಂದು ಧ್ವಜಾರೋಹಣಗೊಳ್ಳಲಿದೆ. ಡಿ.16ರಂದು ಕಜಂಬು ಉತ್ಸವ ನಡೆಯಲಿದ್ದು, ಕೋವಿಡ್ ಇರುವ ಹಿನ್ನೆಲೆಯಲ್ಲಿ ಕಜಂಬಿನ ಮಕ್ಕಳನ್ನು ಸ್ನಾನ ಮಾಡಿಸುವ ಬದಲಾಗಿ ದೇವರ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ. ಅಂತರ ಹಾಗೂ ವ್ಯವಸ್ಥೆಯ ದೃಷ್ಠಿಯಿಂದ ರಾತ್ರಿ 8:30ಕ್ಕೆ ಕಜಂಬಿನ ಧಾರ್ಮಿಕ ಕಾರ್ಯಗಳು ಆರಂಭಗೊಳ್ಳಲಿದೆ. ದೇವಸ್ಥಾನದ ಒಳಗೆ ಯಾರಿಗೂ ಕುಳಿತುಕೊಳ್ಳಲು ಅವಕಾಶವಿಲ್ಲ. ಇದಕ್ಕಾಗಿ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಚಪ್ಪರದ ವ್ಯವಸ್ಥೆಯನ್ನು ಮಾಡಲಾಗಿದೆ. ಡಿ.24ರಂದು ಕೇಪು ಭಂಡಾರ ಕೊಟ್ಟಿಗೆಯಲ್ಲಿ ಮಲರಾಯಿ ಮತ್ತು ಪಿಲಿಚಾಮುಂಡಿ ದೈವಕ್ಕೆ ನೇಮ ನಡೆಯಲಿದೆ ಎಂದು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕೇಪು ಸುಬ್ರಾಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಹಾಗೂ ಬಲಿವಾಡು ಕೂಟ ನಡೆಯಲಿದ್ದು, ಡಿ.೨೦ರಂದು ಬಲಿವಾಡು ಕೂಟ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ೯:೩೦ಕ್ಕೆ ಉತ್ಸವ ಬಲಿ, ಕಟ್ಟೆ ಪೂಜೆ, ಡಿ.೨೧ರಂದು ಬೆಳಗ್ಗೆ ೯ಕ್ಕೆ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ ಎಂದು ತಿಳಿಸಿದರು.
ಕೇಪು ಶ್ರೀ ದುರ್ಗಾಪರಮೇಶ್ವರಿ ಸೇವಾಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಮಾತನಾಡಿ ಡಿ. ೧೫ರಂದು ಬೆಳಗ್ಗೆ ೧೦.೩೦ಕ್ಕೆ ಕೇಪು ಕಲ್ಲಂಗಳ ದ್ವಾರದ ಬಳಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಪ್ರಸಾಧ ಭೋಜನದ ವ್ಯವಸ್ಥೆಯನ್ನು ಮಾಡಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಕರಿಸಬೇಕೆಂದು ತಿಳಿಸಿದರು. ವಿಟ್ಲ ಅರಮನೆಯ ರಾಜರಾಮ ವರ್ಮ ಉಪಸ್ಥಿತರಿದ್ದರು.
Kshetra Samachara
12/12/2020 09:22 pm