ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆಯಲ್ಲಿ ಮನೆಯೊಂದರ ಬಾತ್ ರೂಂನ ಕಿಟಕಿಯ ಸರಳು ಮುರಿದು ಒಳಪ್ರವೇಶಿಸಿದ ಕಳ್ಳರು ಸುಮಾರು 22 ಪವನ್ ಚಿನ್ನಾಭರಣ ಹಾಗೂ ನಗದು 1.50 ಲಕ್ಷ ರೂ. ಕಳವುಗೈದು ಪರಾರಿಯಾದ ಘಟನೆ ನಡೆದಿದೆ.
ಮನೆ ಹಿಂಬದಿಯ ಕಿಟಕಿಯ ಸರಳನ್ನು ಮುರಿದು ಒಳನುಗ್ಗಿರುವ ಕಳ್ಳರು ಕಪಾಟಿನಲ್ಲಿಟ್ಟಿದ್ದ 5 ಮತ್ತು 4 ಪವನಿನ ಪ್ರತ್ಯೇಕ ಎರಡು ಕಾಯಿ ಮಾಲೆ ಸರ, 3 ಪವನ್ ನ ಮುತ್ತಿನ ಮಾಲೆ ಸರ, ಒಂದು ಜೊತೆ ಕಿವಿ ಬೆಂಡೋಲೆ,3 ಉಂಗುರ,7 ಪವನಿನ ಒಂದು ಜೊತೆ ಕಾಲಿನ ಸರವನ್ನು ದೋಚಿದ್ದಾರೆ.
ಕಳವಾದ ಚಿನ್ನಾಭರಣದ ಮೌಲ್ಯ 6.42 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಣಿನಾಲ್ಕೂರು ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಎಂಬವರ ಮನೆಯಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆಯ ಮಧ್ಯೆ ಈ ಕಳವು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಿಗ್ಗೆ ಮನೆಮಂದಿ ಎದ್ದು ನೋಡಿದಾಗ ಕಳವು ಕೃತ್ಯ ಬಯಲಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಶ್ವಾನದಳ,ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ವಗ್ಗ ಬಳಿ ಬಾರ್ ಆ್ಯಂಡ್ ರೆಸ್ಟೋರೆಂಟ್, ಚರ್ಚ್ ಗೂ ನುಗ್ಗಿ ಕಳವು ಕೃತ್ಯ ನಡೆಸಿದ್ದಲ್ಲದೆ ಅಕ್ಕಪಕ್ಕದ ಅಂಗಡಿಯಲ್ಲೂ ಕಳವಿಗೆ ವಿಫಲ ಯತ್ನ ನಡೆಸಲಾಗಿತ್ತು.
Kshetra Samachara
31/01/2021 10:30 pm