ಮಂಗಳೂರು: ರ್‍ಯಾಗಿಂಗ್ ಮಾಡಿರುವ ಆರೋಪದ ಮೇಲೆ ನಗರದ ಶ್ರೀನಿವಾಸ ಫಾರ್ಮಸಿ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಅರೋಪಿಗಳ ಮೇಲೆ ಐಪಿಸಿ ಕಲಂ ಅಡಿಯಲ್ಲಿ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶ್ರೀನಿವಾಸ ಫಾರ್ಮಸಿ ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ಫಾರ್ಮಸಿ ವಿದ್ಯಾರ್ಥಿಗಳಾದ ಜಿಷ್ಣು, ಶ್ರೀಕಂಠ, ಅಶ್ವತ್ಥ್, ಸಾಯಿನಾಥ್, ಅಭಿರಾಂ ರಾಜು, ರಾಹುಲ್, ಶಿವು, ಮುಖ್ತರ್ ಅಲಿ, ಮಹಮ್ಮದ್ ರಜೀಂ ಬಂಧಿತರು.
ಸೀನಿಯರ್ ವಿದ್ಯಾರ್ಥಿಗಳ ರ್‍ಯಾಗಿಂಗ್ ತಡೆಯಲಾರದೆ ಪ್ರಥಮ ಫಾರ್ಮಸಿ ವಿದ್ಯಾರ್ಥಿ ಕಾಲೇಜು ತೊರೆದು ಮನೆಗೆ ಹೋಗಿದ್ದಾನೆ. ಈ ಬಗ್ಗೆ ವಿದ್ಯಾರ್ಥಿಯ ಪೊಷಕರು ಪೊಲೀಸ್ ದೂರು ನೀಡಿದ್ದಾರೆ. ವಿದ್ಯಾರ್ಥಿಯನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದಾಗ ಆತನ ಮೇಲೆ ಸೀನಿಯರ್ ವಿದ್ಯಾರ್ಥಿಗಳು ವಿಪರೀತ ರ್‍ಯಾಗಿಂಗ್ ನಡೆಸಿರೋದು ಬೆಳಕಿಗೆ ಬಂದಿದೆ.
ಸಂತ್ರಸ್ತ ವಿದ್ಯಾರ್ಥಿ ಕೇರಳದ ಕಾಸರಗೋಡು ತಾಲೂಕಿನ ಮೈಥೊಡೆ ಗ್ರಾಮ ನಿವಾಸಿಯಾಗಿದ್ದು, ಜ.7ರಂದು ಎರಡು ಲಕ್ಷ ರೂ. ಫೀಸ್ ಕಟ್ಟಿ ಕಾಲೇಜು ಸೇರಿದ್ದ. ಆದರೆ, ಆ ಬಳಿಕ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ಈತನನ್ನು ಹಾಗೂ ಈತನ ಸಹಪಾಠಿಯನ್ನು ತಮ್ಮ ಪಿಜಿಗೆ ಕರೆಸಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಬೈದು ಕೈಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲಿ ಇವರಲ್ಲದೆ ಇತರ ನಾಲ್ವರು ವಿದ್ಯಾರ್ಥಿಗಳು ಸೇರಿ ಆರು ಮಂದಿಗೆ ಸಣ್ಣದಾಗಿ ಮಿಲಿಟರಿ ಕಟ್ಟಿಂಗ್ ಮಾಡಿಸಬೇಕೆಂದು ಹೇಳಿದ್ದಾರೆ. ಆ ಬಳಿಕ ತಮ್ಮಲ್ಲಿಗೆ ಬಂದು ತೋರಿಸಬೇಕೆಂದು ರ್‍ಯಾಗಿಂಗ್ ಮಾಡಿದ್ದಾರೆ.
ಇದಲ್ಲದೆ ಸಂತ್ರಸ್ತ ವಿದ್ಯಾರ್ಥಿಗೆ ಸೀನಿಯರ್ ವಿದ್ಯಾರ್ಥಿಗಳ ಹೆಸರು ಬರೆದು ಬರಲು ಹೇಳಿದ್ದಾರೆ. ಅವನು ಯಾರಲ್ಲೋ ಕಾಡಿ ಬೇಡಿ ಎಲ್ಲರ ಹೆಸರು ಬರೆದು ಅವರಿಗೆ ತೋರಿಸಿದರೆ ತಮ್ಮ ಹೆಸರಿನ ಮುಂದೆ ಅಣ್ಣ ಬರೆಯಲಿಲ್ಲ ಯಾಕೆ ಎಂದು ಮತ್ತೆ ರ್‍ಯಾಗಿಂಗ್ ಮಾಡಿದ್ದಾರೆ. ಐದಾರು ದಿನಗಳ ನಿರಂತರ ರ್‍ಯಾಗಿಂಗ್ ನಿಂದ ಬೇಸತ್ತ ವಿದ್ಯಾರ್ಥಿ ಕಾಲೇಜು ತೊರೆದು ತನ್ನ ಮನೆಗೆ ಹೋಗಿದ್ದ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ರ್‍ಯಾಗಿಂಗ್ ವಿಚಾರದಲ್ಲಿ ಕಾಲೇಜಿನ ಪ್ರಾಂಶುಪಾಲರು, ಹಾಸ್ಟೆಲ್ ವಾರ್ಡನ್ ಹಾಗೂ ವಿದ್ಯಾರ್ಥಿ ಕೌನ್ಸಿಲರುಗಳನ್ನು ಕರೆಸಿ ಮಾತನಾಡಿದರೆ ತಮಗೆ ಈ ವಿಚಾರವೇ ತಿಳಿದಿಲ್ಲ, ಯಾವುದೇ ದೂರು ಬಂದಿಲ್ಲ ಎಂದು ಉಡಾಫೆಯ ಉತ್ತರ ಕೇಳಿ ಬಂದಿದೆ. ಆದ್ದರಿಂದ ಈ ಮೂವರ ಬಗ್ಗೆಯೂ ವಿಚಾರಣೆ ನಡೆಸಿ ಅವರಿಂದ ನಿರ್ಲಕ್ಷ್ಯ ಮಾತ್ರ ಆಗಿದೆಯೇ ಅಥವಾ ಕ್ರಿಮಿನಲ್ ನಿರ್ಲಕ್ಷ್ಯವೂ ಆಗುತ್ತದೆಯೇ ಎಂದು ತನಿಖೆ ನಡೆಸಲಾಗುತ್ತದೆ. ಅಲ್ಲದೆ, ಇವರ ನಿರ್ಲಕ್ಷ್ಯಕ್ಕೆ ಕಾನೂನಿನಡಿ ಯಾವುದಾದರೂ ಕ್ರಮ ವಹಿಸಲು ಸಾಧ್ಯವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
Kshetra Samachara
22/01/2021 05:37 pm