ಮಂಗಳೂರು: ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 52 ಕೋಟಿ ರೂ. ವಂಚನೆಗೆ ಯತ್ನಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ 6 ಮಂದಿಯನ್ನು ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ.
ಮೂಡುಬಿದ್ರಿ ನಿವಾಸಿ ಯೋಗೀಶ್ ಆಚಾರ್ಯ (40), ಕಾಂತವರ ಮೂಲದ ಉದಯ್ ಶೆಟ್ಟಿ (35), ಮಂಗಳೂರಿನ ಬ್ರಿಜೆಶ್ ರೈ (35), ಬೆಳ್ತಂಗಡಿಯ ಗಂಗಾಧರ್ ಸುವರ್ಣ (45) ಮತ್ತು ಇತರ ಇಬ್ಬರನ್ನು ಬಂಧಿತ ಆರೋಪಿಗಳು. ಕೆಲ ಆರೋಪಿಗಳು ಆಂಧ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 117 ಕೋಟಿ ರೂ.ವನ್ನು ನಕಲಿ ಸಹಿಯೊಂದಿಗೆ ವಂಚಿಸಲು ಮುಂದಾಗಿದ್ದರು ಎನ್ನಲಾಗಿದೆ. ಈ ಪೈಕಿ ಜಿಲ್ಲೆಯ ಆರು ಜನರು 52 ಕೋಟಿ ರೂ.ಗಳನ್ನು ವಂಚಿಸುವ ಪ್ರಯತ್ನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ಎನ್‌ಕ್ಯಾಶ್‌ಮೆಂಟ್‌ಗಾಗಿ 52 ಕೋಟಿ ರೂ.ಗಳ ಚೆಕ್ ನೀಡಿದಾಗ ಬ್ಯಾಂಕ್ ಅಧಿಕಾರಿಗೆ ಶಂಕೆ ವ್ಯಕ್ತವಾಗಿತ್ತು. ತಕ್ಷಣವೇ ಅವರು ಆಂಧ್ರ ಸಿಎಂ ರಿಲೀಫ್ ಫಂಡ್ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಶೀಲನೆ ನಡೆಸಿದಾಗ ನಕಲಿ ಸಹಿ ಹೊಂದಿರುವ ಚೆಕ್ ಅನ್ನು ಬಳಸಲಾಗಿದೆ ಎಂದು ಕಂಡುಬಂದಿದೆ. ಇದರಿಂದಾಗಿ ಚೆಕ್ ಪಾವತಿಯನ್ನು ತಡೆದು ಆಂಧ್ರ ಪೊಲೀಸರು ಮೂಡುಬಿದ್ರಿಗೆ ಬಂದು ಯೋಗೀಶ್ ಆಚಾರ್ಯ ಮತ್ತು ಉದಯ್ ಶೆಟ್ಟಿಯನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮೂಡುಬಿದ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ವಾರಂಟ್‌ನ ಆಧಾರದ ಮೇಲೆ ಆಂಧ್ರಕ್ಕೆ ಕರೆದೊಯ್ಯಲಾಗಿದೆ.
Kshetra Samachara
07/10/2020 07:34 pm