ಮಂಗಳೂರು: ಪತ್ನಿಯ ಸಹೋದರಿಯನ್ನೇ ಬಯಸಿ ಆಕೆಯ ಪತಿಯ ಹತ್ಯೆಗೈದ ಆರೋಪಿ ಹಾಗೂ ಆತನಿಗೆ ಸಹಕರಿಸಿದ ಮತ್ತೋರ್ವ ಆರೋಪಿ ಸೇರಿ ಇಬ್ಬರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ದೇವರಗುಡ್ಡದ ನಿವಾಸಿ ನಾಗರಾಜ ಗೋವಿಂದಪ್ಪ ಲಮಾಣಿ (28) ಮತ್ತು ರಾಣೆಬೆನ್ನೂರು ಹನುಮಾಪುರದ ವೀರೇಶ್ ಶಿವಪ್ಪ ಲಮಾಣಿ(32) ಶಿಕ್ಷೆಗೊಳಗಾದವರು. ಪ್ರಕರಣ ವಿವರ: ಆರೋಪಿ ನಾಗರಾಜ ಗೋವಿಂದಪ್ಪ ಕಾಸರಗೋಡಿನ ಹೊಸಂಗಡಿಯಲ್ಲಿ ವಾಸವಾಗಿದ್ದು, ತನ್ನ ಪತ್ನಿಯ ಅಕ್ಕನ ಪತಿ ರೇಖಪ್ಪ ಲಮಾಣಿಯನ್ನು ಕೂಡ ಹೊಸಂಗಡಿಗೆ ಕರೆದುಕೊಂಡು ಬಂದಿದ್ದ. ನಾಗರಾಜ ಗೋವಿಂದಪ್ಪನು ರೇಖಪ್ಪ ಲಮಾಣಿಯ ಪತ್ನಿ ಸಾವಿತ್ರಿ (ಪತ್ನಿಯ ಅಕ್ಕ) ಯವರನ್ನು ಬಯಸಿದ್ದ. ಆದ್ದರಿಂದ ಆಕೆಯನ್ನು ತನ್ನವಳನ್ನಾಗಿ ಮಾಡುವ ಉದ್ದೇಶ ಹೊಂದಿದ್ದ. ಇದು ರೇಖಪ್ಪ ಲಮಾಣಿಗೆ ತಿಳಿದು ಅವರು 2016ರ ಸೆ.4ರಂದು ತನ್ನ ಹುಟ್ಟೂರಿಗೆ ತೆರಳಲು ಸಿದ್ಧರಾಗಿದ್ದರು. ಆಗ ನಾಗರಾಜ ಗೋವಿಂದಪ್ಪನು ರೇಖಪ್ಪ ಲಮಾಣಿಯನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಸ್ನೇಹಿತನಾದ ವೀರೇಶ್ ಶಿವಪ್ಪ ಲಮಾಣಿ ಎಂಬಾತನೊಂದಿಗೆ ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಅಲ್ಲಿ ಬಾರ್‌ವೊಂದರಲ್ಲಿ ಮದ್ಯ ಕುಡಿಸಿ ಪಣಂಬೂರಿಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಜನಸಂಚಾರವಿಲ್ಲದ ಸ್ಥಳದಲ್ಲಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ದೊಡ್ಡ ಕಲ್ಲನ್ನು ರೇಖಪ್ಪ ಲಮಾಣಿ ಅವರ ಮೇಲೆ ಎತ್ತಿ ಹಾಕಿದ್ದರು.
ಕೊಲೆ ನಡೆಸಿದ ಬಳಿಕ ರಾತ್ರಿ ಮರಳಿ ಹೊಸಂಗಡಿಗೆ ಮರಳಲು ಬೈಕಂಪಾಡಿಯಲ್ಲಿ ಬೈಕ್‌ನವರೊಬ್ಬರನ್ನು ನಿಲ್ಲಿಸಿ ಅವರಲ್ಲಿ ಡ್ರಾಪ್ ಕೇಳಿ ಕೂಳೂರುವರೆಗೆ ಬಂದು ಅನಂತರ ಹೊಸಂಗಡಿಗೆ ತೆರಳಿದ್ದರು. ಘಟನೆ ನಡೆದು ಎರಡು ದಿನಗಳ ಬಳಿಕ ಸಾರ್ವಜನಿಕರ ಗಮನಕ್ಕೆ ಬಂದು, ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಮೊದಲು ಅಸ್ವಾಭಾವಿಕ ಸಾವು ಪ್ರಕರಣವೆಂದು ದಾಖಲಿಸಿಕೊಂಡರೂ, ನಂತರ ಶವಮಹಜರು ಸಂದರ್ಭ ಸಾಕ್ಷಿದಾರರು ನೀಡಿದ ಹೇಳಿಕೆ ಮತ್ತು ಮರಣೋತ್ತರ ವರದಿಯಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಪಣಂಬೂರು ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದಲ್ಲಿ 22 ಮಂದಿಯನ್ನು ಸಾಕ್ಷಿದಾರರಾಗಿ ವಿಚಾರಿಸಲಾಗಿತ್ತು. ಕೊಲೆ ಮಾಡಿದ್ದನ್ನು ನೋಡಿದ ಯಾವುದೇ ಪ್ರತ್ಯಕ್ಷ ಸಾಕ್ಷಿದಾರರು ಇರದೇ ಇವುದರಿಂದ ಕೇವಲ ಸಾಂದರ್ಭಿಕ ಸಾಕ್ಷಿ ಮಾತ್ರ ಲಭ್ಯವಾಗಿದೆ. ಕೂಳೂರುವರೆಗೆ ಮೋಟಾರ್ ಸೈಕಲ್‌ನಲ್ಲಿ ಡ್ರಾಪ್ ನೀಡಿದವರು, ನಂತರ ಕೂಳೂರಿನಿಂದ ಪಂಪ್‌ವೆಲ್‌ಗೆ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋದ ಚಾಲಕ, ಬಾರ್‌ನ ಮೇಲ್ವಿಚಾರಕರು, ಮೃತರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ ಸಾಕ್ಷಿ, ಆರೋಪಿಗಳು ಕೊಲೆ ಮಾಡುವ ಸಮಯದಲ್ಲಿ ಧರಿಸಿದ್ದ ಬಟ್ಟೆಗಳ ಮೇಲೆ ಇದ್ದ ರಕ್ತದ ಕಲೆಗಳ ಬಗ್ಗೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದವರು ನೀಡಿದ ಸಾಕ್ಷಿ, ಘಟನಾ ಸ್ಥಳದ ಮಣ್ಣು ಇತ್ಯಾದಿಗಳನ್ನು ಪ್ರಮುಖವಾಗಿ ಪರಿಗಣಿಸಿ ಆರೋಪಿಗಳು ಕೊಲೆ ಮಾಡಿರುವುದನ್ನು ಅಭಿಯೋಜಕರು ಋಜುವಾತುಪಡಿಸಿದ್ದಾರೆ.
ಈ ಬಗ್ಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿಯವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಪ್ರತಿಯೊಬ್ಬ ಆರೋಪಿಗೆ ತಲಾ 10,000 ರೂ. ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ 10,000 ರೂ.ಗಳನ್ನು ರೇಖಪ್ಪ ಲಮಾಣಿ ಅವರ ಪತ್ನಿಗೆ ನೀಡಲು ಆದೇಶಿಸಿದ್ದಾರೆ. ಅಲ್ಲದೆ, ರೇಖಪ್ಪ ಲಮಾಣಿ ಅವರ ಪತ್ನಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಸೇರಿಗಾರ್ ಯು. ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆ.
Kshetra Samachara
18/02/2021 01:43 pm