ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪುನರೂರು ಅಂಗರಗುಡ್ಡೆ ಯಲ್ಲಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ ಗೋವುಗಳನ್ನು ಹಿಂದೂ ಸಂಘಟನೆಗಳ ಮಾಹಿತಿಯಿಂದ ಮುಲ್ಕಿ ಪೊಲೀಸರು ರಕ್ಷಿಸಿದ್ದಾರೆ.
ಬೆಳಗಿನಿಂದಲೇ ಕಸಾಯಿಖಾನೆಯ ಬಳಿಯಲ್ಲಿ ಅಕ್ರಮವಾಗಿ ಕಟ್ಟಿಹಾಕಿದ್ದ ಗೋವುಗಳನ್ನು ರಕ್ಷಿಸಲು ಸುರತ್ಕಲ್ ಹಾಗೂ ಸ್ಥಳೀಯ ಹಿಂದೂ ಸಂಘಟನೆಯ ಪ್ರಮುಖರು ಅಂಗರ ಗುಡ್ಡೆಯಲ್ಲಿ ಸೇರಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಬಗ್ಗೆ ಮುಲ್ಕಿ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರು ಅಕ್ರಮವಾಗಿ ಗೋವುಗಳನ್ನು ಕಟ್ಟಿಹಾಕಿದ್ದ ಪರಿಸರಕ್ಕೆ ತೆರಳಿ ಒಂಬತ್ತು ಗೋವುಗಳನ್ನು ವಶಪಡಿಸಿದ್ದಾರೆ.
ಸ್ಥಳೀಯ ಗೋರಕ್ಷಾ ಪ್ರಮುಖರಾದ ಅಮಿತ್ರಾಜ್ ಮಾತನಾಡಿ, ಪುನರೂರು ಅಂಗರಗುಡ್ಡೆ ಪರಿಸರದಲ್ಲಿ ಕೆಲವು ತಿಂಗಳಿನಿಂದ ನಿರಂತರ ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದು ಕೆಲ ತಿಂಗಳ ಹಿಂದೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ತೆರಳಿ ಕಸಾಯಿಖಾನೆ ಮುಚ್ಚಲಾಗಿತ್ತು.
ಆದರೂ ಬಳಿಕ ಮತ್ತೆ ಅಕ್ರಮವಾಗಿ ಪರಿಸರದಲ್ಲಿ ಮತ್ತೆ ಗೋವಧೆ ಮಾಡುತ್ತಿದ್ದು, ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಲ್ಕಿ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.
Kshetra Samachara
18/10/2020 06:53 pm