ಮಂಗಳೂರು : ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವುದಲ್ಲದೆ, ಮದುವೆ ಪ್ರಸ್ತಾಪ, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕುರುಬನಹಳ್ಳಿ ನಿವಾಸಿ ಪರಮೇಶ್ವರಪ್ಪ ರಂಗಪ್ಪ (23) ಬಂಧಿತ ಆರೋಪಿ.
ಮ್ಯಾಟ್ರೊಮೊನಿಯಲ್ ನಲ್ಲಿ ಆರೋಪಿಯು ತಾನು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ಎಂಬುದಾಗಿ ಬಿಂಬಿಸಿದ್ದ.
ಬಳಿಕ ಗೋವಾದ ನಿವಾಸಿ ಹನುಮಪ್ಪ ಬಿಸಳ್ಳಿ ಎಂಬವರ ಪುತ್ರಿಗೆ ವಾಟ್ಸ್ ಆ್ಯಪ್ ನಲ್ಲಿ ಅಂಚೆ ಇಲಾಖೆಗೆ ಸಂಬಂಧಿಸಿದಂತೆ ತನಗೆ ರಾಜ್ಯೋತ್ಸವ ಮತ್ತು ಮೇಘದೂತ ಪ್ರಶಸ್ತಿ ಬಂದಿರುವ ದೃಶ್ಯಾವಳಿಗಳನ್ನು ಕಳುಹಿಸಿದ್ದ.
ತನ್ನ ಮಗಳಿಗೆ ನೆಂಟಸ್ಥಿಕೆ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯ ಬಗ್ಗೆ ಹನುಮಪ್ಪ ಮಂಗಳೂರಿನ ಅಂಚೆ ಇಲಾಖೆಯಲ್ಲಿ ವಿಚಾರಿಸಿದಾಗ ಆತ ವಂಚಿಸುತ್ತಿರುವ ಸಂಗತಿ ಬೆಳಕಿಗೆ ಬಂದಿತ್ತು.
ಬಳಿಕ ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಡಿ.2ರಂದು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.
ಡಿ.20ರಂದು ಆರೋಪಿಯು ಮಂಗಳೂರು ನಗರದ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಗೆ ಅಂಚೆ ಇಲಾಖೆಯಲ್ಲಿನ ಗ್ರೇಡ್-1, ಗ್ರೇಡ್-2 ಹುದ್ದೆ ಖಾಲಿ ಇರುವುದಾಗಿ ತಿಳಿಸಿದ್ದನು.
ಈ ಸಿಬ್ಬಂದಿಗೆ ಈತ ಮಹಿಳೆಯ ಹೆಸರಲ್ಲಿನ ನಕಲಿ ಖಾತೆಯ ಮೂಲಕ ಪರಿಚಯವಾಗಿದ್ದ. ಬಳಿಕ ಮೆಸೆಂಜರ್, ವಾಟ್ಸ್ಆ್ಯಪ್ ನಲ್ಲಿ ಚಾಟ್ ಮಾಡಿ ಇಬ್ಬರಿಂದಲೂ ಆರು ಲಕ್ಷ ರೂ. ನಗದು ಪಡೆದು ವಂಚಿಸಿದ್ದ.
ಎರಡೂ ಪ್ರಕರಣಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಸೈಬರ್ ಕ್ರೈಂ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತ 20 ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಇಲಾಖೆಗಳ ಉತ್ತಮ ದರ್ಜೆಯ ಅಧಿಕಾರಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ್ದ.
ಇದನ್ನು ತನ್ನ ದಂಧೆಗೆ ಬಳಸಿಕೊಳ್ಳುತ್ತಿದ್ದ. ಈತ ಈ ವರೆಗೆ 13 ಮಂದಿಯನ್ನು ವಂಚಿಸಿದ್ದಾನೆ ಎಂದು ಪೊಲೀಸರು ಮಾಹಿತಿನೀಡಿದ್ದಾರೆ.
ಬಂಧಿತ ಆರೋಪಿಯಿಂದ ಲ್ಯಾಪ್ ಟಾಪ್, ಐದು ಮೊಬೈಲ್ ಗಳು, ಅಂಚೆ ಇಲಾಖೆಯ ನಕಲಿ ಗುರುತಿನ ಚೀಟಿ, ಐಸಿಐಸಿಐ ಬ್ಯಾಂಕ್ ನ ಡೆಬಿಟ್ ಕಾರ್ಡ್ ವೊಂದನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ವಸ್ತುಗಳ ಸೊತ್ತಿನ ವೌಲ್ಯ 1.35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಯನ್ನು ನಗರದ 2ನೇ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕೋವಿಡ್ ಪರೀಕ್ಷೆಯ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಈತ ಪೊಲೀಸರ ವಶದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
24/12/2020 08:59 pm