ಮುಲ್ಕಿ: ತಾನೇ ಬೀಸಿದ ಬಲೆಗೆ ಸಿಲುಕಿ ಮೀನುಗಾರನೋರ್ವ ಸಾವನ್ನಪ್ಪಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಕೊಪ್ಲ ಸಮುದ್ರದಲ್ಲಿ ಸೋಮವಾರ ನಡೆದಿದೆ.
ಲೋಕೇಶ್ ಕೋಟ್ಯಾನ್(40) ಬಲೆಗೆ ಸಿಲುಕಿ ಮೃತ ದುರ್ದೈವಿ. ಲೋಕೇಶ್ ಸಮುದ್ರ ದಡದಲ್ಲಿ ಸುರಕ್ಷತೆಯ ರಬ್ಬರ್ ಟ್ಯೂಬ್ ಹಾಕಿ ಈಜಿ ಬಲೆ ಬಿಡುತ್ತಿದ್ದರು. ಈ ವೇಳೆ ಬೃಹತ್ ತೆರೆ ಬಂದು ಆಕಸ್ಮಿಕವಾಗಿ ಬಲೆಯು ಲೋಕೇಶ್ ಅವರ ಕಾಲಿಗೆ ಸಿಲುಕಿಕೊಂಡಿತ್ತು. ತಕ್ಷಣವೇ ಬಲೆ ಬಿಡಿಸಲು ಯತ್ನಿಸಿದಾಗ ಟ್ಯೂಬ್ ಜಾರಿ ಈ ದುರಂತ ಸಂಭವಿಸಿದೆ.
ಈ ವೇಳೆ ಅಲ್ಲೇ ಇದ್ದ ಮೀನುಗಾರರು ರಕ್ಷಣೆಗೆ ಧಾವಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿ ಆಗದೆ ಲೋಕೇಶ್ ಮೃತಪಟ್ಟರು. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/12/2020 07:25 pm