ಮುಲ್ಕಿ: ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟದ ಮಹಿಳೆಯರ ಎರಡು ತಂಡಗಳ ನಡುವೆ ಮೀನು ಮಾರಾಟ ವಿಚಾರದಲ್ಲಿ ಜಟಾಪಟಿ ನಡೆದಿದ್ದು, ಮಂಗಳವಾರ ಮಹಿಳೆಯರು ಮೀನು ಮಾರಾಟ ಮಾಡದೆ ಪ್ರತಿಭಟನೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ಕಿನ್ನಿಗೋಳಿ ಮೀನು ಮಾರಾಟ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ಇನ್ನೊಬ್ಬರು ಮಹಿಳೆ ಜೀವ ಬೆದರಿಕೆ ಹಾಕಿದ್ದು, ಅದನ್ನು ಪ್ರಶ್ನಿಸಿದ್ದಕ್ಕೆ ಆ ಮಹಿಳೆ ವಿರುದ್ಧ ಮುಲ್ಕಿ ಠಾಣೆಯಲ್ಲಿ ಇನ್ನೊಬ್ಬರು ಮಹಿಳೆ ಜಾತಿನಿಂದನೆ ದೂರು ನೀಡಿದ್ದು ರಾದ್ಧಾಂತಕ್ಕೆ ಕಾರಣವಾಯಿತು. ಜಾತಿ ನಿಂದನೆ ಎಂಬ ಸುಳ್ಳು ದೂರು ನೀಡಿದ ಬಗ್ಗೆ ಕಿನ್ನಿಗೋಳಿ ಮೀನು ಮಾರಾಟಗಾರ ಮಹಿಳೆಯರು ಆಕ್ರೋಶಗೊಂಡು ಕಿನ್ನಿಗೋಳಿ ಮೀನು ಮಾರಾಟ ಮಾರುಕಟ್ಟೆಯಲ್ಲಿ ದಿನವಿಡೀ ಮೀನು ಮಾರದೇ ಧರಣಿ ಕುಳಿತರು.
ಈ ನಡುವೆ ಜಾತಿ ನಿಂದನೆ ಸುಳ್ಳು ದೂರು ನೀಡಿದ ಬಗ್ಗೆ ಮುಲ್ಕಿ ಪೊಲೀಸರು ಕಿನ್ನಿಗೋಳಿ ಮೀನು ಮಾರುಕಟ್ಟೆಗೆ ತನಿಖೆಗೆ ಬಂದಾಗ ಮಾತಿನ ಚಕಮಕಿಯೂ ನಡೆಯಿತು. ಬಳಿಕ ರಾಜಿ ಸಂಧಾನಕ್ಕೆ ಮುಲ್ಕಿ ಪೊಲೀಸರು ಹಾಗೂ ಕಿನ್ನಿಗೋಳಿ ಪಂಚಾಯಿತಿ ಅಧಿಕಾರಿಗಳು ಮುಂದಾದರು. ಈ ನಡುವೆ ಜಾತಿ ನಿಂದನೆ ದೂರು ನೀಡಿದ ಮಹಿಳೆಯು ತಮ್ಮ ಸಮುದಾಯಕ್ಕೆ ಮಾರುಕಟ್ಟೆಯಲ್ಲಿ ಮೂರು ಕೌಂಟರ್ ಕೊಡಬೇಕೆಂದು ಪಟ್ಟು ಹಿಡಿದರು. ಆದರೆ, ಹಲವಾರು ವರ್ಷಗಳಿಂದ ಕಿನ್ನಿಗೋಳಿಯ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಿರುವ ಸಸಿಹಿತ್ಲು, ಮುಲ್ಕಿ, ಹೆಜಮಾಡಿ ಪರಿಸರದ ಮಹಿಳೆಯರು ಇದಕ್ಕೆ ಒಪ್ಪದೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಪ್ರತಿಭಟನೆ ಮತ್ತಷ್ಟು ತಾರಕಕ್ಕೇರುವ ಲಕ್ಷಣ ಗೋಚರಿಸಿದೆ.
Kshetra Samachara
15/12/2020 11:33 pm