ಮುಲ್ಕಿ: ಮುಲ್ಕಿ ಸಮೀಪದ ಬಳ್ಕುಂಜೆ ಪ್ರದೇಶದಲ್ಲಿ ಇಬ್ಬರು ಬೆಡ್‌ಶೀಟ್ ಮಾರಿಕೊಂಡು ಟೀಚರ್ ಮನೆಗೆ ಬಂದು ಕಳಪೆ ಬೆಡ್‌ಶೀಟ್ ನೀಡಿ ಹಣ ವಂಚನೆ ಮಾಡಿದ ಘಟನೆ ನಡೆದಿದೆ.
ಬಳ್ಕುಂಜೆಯ ತುಂಡುಪಡ್ಪು ಎಂಬಲ್ಲಿ ವಾಸವಿರುವ ಕರ್ನಿರೆ ಮೂಲದ ಟೀಚರ್ ಮನೆಗೆ ಆಗಮಿಸಿದ ಇಬ್ಬರು ಯುವಕರು ಬೆಡ್‌ಶೀಟ್ ಮಾರಾಟಕ್ಕೆಂದು ಬಂದು ನಯ ವಿನಯಗಳಿಂದ ಮಾತನಾಡಿ ವಂಚನೆ ಮಾಡಿದ್ದಾರೆ. ಯುವಕರು ಸೀದಾ ಮನೆಯೊಳಗೆ ಬಂದು ಟೀಚರ್ ಅವರ ಕಾಲಿಗೆ ನಮಸ್ಕರಿಸಿ ನಾವು ನಿಮ್ಮ ಶಿಷ್ಯಂದಿರು, ಕಟೀಲು ನೇಕಾರ ಸೌಧದಿಂದ ಬಂದಿದ್ದೇವೆ ಎಂದೆಲ್ಲ ಹೇಳಿ, ಕೂಡಲೇ ಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯ ಪತಿಯವರನ್ನು ಕರೆಸಿ ಸುಮಾರು 10 ಜೋಡಿ ಬೆಡ್‌ಶೀಟ್‌ಗಳನ್ನು 9,500 ರೂ.ಗೆ ಕೊಟ್ಟು ಶಿಕ್ಷಕಿಯನ್ನು ಮೋಸ ಮಾಡಿದ್ದಾರೆ.
ಮನೆಗೆ ಬಂದ ಯುವಕರು ಮೋಸ, ತಂತ್ರಗಾರಿಕೆಯಿಂದಲೇ ಬಂದಿದ್ದು ಶಿಕ್ಷಕಿಯ ಪತಿ ವ್ಯಾಪಾರ ಮಾಡುವಾಗ ಮಾತು ಬಾರದೆ ಸೋಫಾದಲ್ಲಿ ಕುಳಿತುಕೊಂಡಲ್ಲಿಯೇ ಇದ್ದರು ಎನ್ನಲಾಗಿದೆ. ಅವರು ಹೋದ ಮೇಲೆ ಮೋಸ ಹೋದ ಬಗ್ಗೆ ತಿಳಿದು ಬಂದಿದೆ. ಯುವಕರು ಮೋಸ ಮಾಡಿಕೊಟ್ಟ ಬೆಡ್ ಶೀಟ್ ಗಳ ಬೆಲೆ ಹೆಚ್ಚೆಂದರೆ 2,000 ರೂ. ಮೌಲ್ಯದ್ದು.
ಈ ನಡುವೆ ಬೆಡ್‌ಶೀಟ್ ಮಾರಾಟ ಮಾಡುತ್ತಿದ್ದ ಯುವಕರು ಫ್ರೀಸ್ ಕಾರಿನಲ್ಲಿ ಬಂದು ಕಟೀಲಿನ ತುದಾಮ ಬಳಿಯ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಎಂಬವರ ಮನೆಗೂ ಬಂದಿದ್ದು ಇದೇ ರೀತಿ ಮೋಸ ಮಾಡಲು ಯತ್ನಿಸಿ ವಿಫಲರಾಗಿದ್ದರು ಎಂದು ಸ್ಟ್ಯಾನಿ ಪಿಂಟೊ ತಿಳಿಸಿದ್ದಾರೆ. ಬಳಿಕ ಯುವಕರು ಬಳ್ಕುಂಜೆ ಕಡೆಗೆ ತೆರಳಿದ್ದಾರೆ ಎಂದರು. ಈ ಬಗ್ಗೆ ಶಿಕ್ಷಕರು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
18/11/2020 11:36 am