ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯಕಾಡು ಪ್ರಶಾಂತ್ ವೈನ್ ಶಾಪ್ ಬಳಿ ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್ ತಂಡವೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಮುಲ್ಕಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ರೌಡಿಶೀಟರ್ ಜಗ್ಗು ಯಾನೆ ಜಗನ್ನಾಥ, ರಾಜೇಂದ್ರ, ರಾಜೇಶ ಹಾಗೂ ಕೆರೆಕಾಡು ನಿವಾಸಿ ಶ್ರೀಕಾಂತ್ ಎಂದು ಗುರುತಿಸಲಾಗಿದೆ.
ಆರೋಪಿಗಳಾದ ರೌಡಿಶೀಟರ್ ಜಗ್ಗು ಯಾನೆ ಜಗನ್ನಾಥ ಮತ್ತಿತರರು ಮುಲ್ಕಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ಪ್ರಶಾಂತ್ ವೈನ್ಸ್ ಗೆ ಮದ್ಯ ಸೇವಿಸಲು ಹೋಗಿದ್ದು, ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಉಮೇಶ ಎಂಬವರ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮದ್ಯ ತೆಗೆಸಿಕೊಡಲು ಪೀಡಿಸಿದ್ದಾನೆ.
ಈ ಸಂದರ್ಭ ಉಮೇಶ(27) ನಿರಾಕರಿಸಿದಾಗ ಆರೋಪಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭ ಉಮೇಶ ಸ್ಥಳದಲ್ಲಿ ತಪ್ಪಿಸಿಕೊಂಡು ಓಡಿ, ತಾನು ಕೆಲಸ ಮಾಡುತ್ತಿದ್ದ ಕೊಲ್ನಾಡು ಪ್ಲಾಸ್ಟಿಕ್ ಕಂಪೆನಿಯ ಮಾಲೀಕ ಸಮೀರ್ ಎ. ಎಚ್. ಅವರಿಗೆ ತಿಳಿಸಿದ್ದು, ಅವರು ಕೂಡಲೇ ಆಗಮಿಸಿ, ಆರೋಪಿಗಳು ಹಲ್ಲೆ ನಡೆಸಿದರೂ ಪ್ರಶಾಂತ್ ವೈನ್ಸ್ ನ ಮ್ಯಾನೇಜರ್ ಸೂಕ್ತ ಕ್ರಮ ಕೈಗೊಳ್ಳದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗ ಸ್ಥಳದಲ್ಲಿದ್ದ ಆರೋಪಿಗಳಾದ ಜಗ್ಗು ಯಾನೆ ಜಗನ್ನಾಥ ಮತ್ತಿತರರು ಮತ್ತೆ ಗಲಾಟೆ ಮಾಡಲು ಬಂದಿದ್ದು, ಗಲಾಟೆ ಪ್ರಶ್ನಿಸಲು ಬಂದಿದ್ದ ಸಮೀರ್ ಅವರಿಗೆ ಏಕಾಏಕಿ ಚೂರಿ ಹಾಕಲು ಮುಂದಾದಾಗ ಸಮೀರ್ ಜೊತೆಗೆ ಇದ್ದ ಮೊಹಮ್ಮದ್ ಅಜೀಮ್(27) ಅಡ್ಡ ಬಂದಿದ್ದು ಚೂರಿ ಇರಿತ ದಿಂದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಲ್ಕಿ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಲಿಂಗಪ್ಪಯ್ಯಕಾಡಿನ ಪ್ರಶಾಂತ್ ವೈನ್ಸ್ ನಲ್ಲಿ ಕಳೆದ ಕೆಲವು ತಿಂಗಳಿನಿಂದ ಕೊರೋನಾ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮದ್ಯ ವ್ಯಸನಿಗಳ ಗಲಾಟೆ ವಿಪರೀತವಾಗುತ್ತಿದ್ದು, ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
24/10/2020 10:25 pm