ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಮೇಗರವಳ್ಳಿಯಲ್ಲಿ ಸೋಮವಾರ ಮಧ್ಯರಾತ್ರಿ ಇನ್ನೋವಾ ಕಾರಿನಲ್ಲಿ ಬಂದ 6-7 ಜನ ಡಕಾಯಿತರು ಮೂವರ ಮೇಲೆ ಹಲ್ಲೆ ಮಾಡಿ ವಿಫಲ ಯತ್ನ ನಡೆಸಿದ್ದಾರೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಮೇಗರವಳ್ಳಿ ಗ್ರಾಮದಲ್ಲಿ ಪುರುಷೋತ್ತಮ ಹೆಗಡೆ ಮತ್ತು ಗಣೇಶ್ ಹೆಗ್ಡೆ ಎಂಬವರ ರಸ್ತೆ ಪಕ್ಕದ ಮನೆಗೆ ಮಧ್ಯರಾತ್ರಿ 12:30 ವೇಳೆಯಲ್ಲಿ ಬಿಳಿ ಬಣ್ಣದ ಇನೋವಾ ಕಾರಿನಲ್ಲಿ ಬಂದ ಸುಮಾರು 6-7 ಜನ ಬಾಗಿಲು ಒಡೆದು ದರೋಡೆಗೆ ಯತ್ನಿಸಿದ್ದಾರೆ.
ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಗಣೇಶ್ ಹೆಗಡೆ ಮತ್ತು ಅವರ ಮಗನಿಗೆ ಗಾಯವಾಗಿದೆ.
ಗಲಾಟೆ ವೇಳೆ ಕೋವಿ ತಂದು ಹೆದರಿಸಿ ಕೂಗಾಡಿದ್ದರಿಂದ ಡಕಾಯಿತರು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ಆಗುಂಬೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಳ್ಳರ ಪತ್ತೆಗೆ ಮುಂದಾಗಿದ್ದು, ಗಾಯಗೊಂಡಿರುವ ಗಣೇಶ್ ಹೆಗಡೆ ಮತ್ತು ಅವರ ಮಗ ಚಿಕಿತ್ಸೆ ಪಡೆದಿದ್ದಾರೆ.
ಪೊಲೀಸ್ ಇಲಾಖೆ ವೈಫಲ್ಯವೇ ಪದೇ ಪದೆ ಇಂತಹ ಘಟನೆಗಳಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಮ್ಮನೆ ಭೇಟಿ: ದರೋಡೆ ಯತ್ನ ನಡೆದ ಮನೆಗೆ ಮಂಗಳವಾರ ಬೆಳಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ಮಾಡಿ ಸಾಂತ್ವನ ಹೇಳಿದರು.
ಸ್ಥಳದಿಂದ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ ಅವರು, ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲು ಮನವಿ ಮಾಡಿದರು.
Kshetra Samachara
13/10/2020 09:58 pm