ಬಂಟ್ವಾಳ: ಶುಕ್ರವಾರ ಬೆಳಗ್ಗೆ ವಿಟ್ಲ ಮೇಗಿನಪೇಟೆಯಲ್ಲಿ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ತೀವ್ರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ವಿಟ್ಲ ಪೊಲೀಸರು ದರೋಡೆ ಯತ್ನ ಎಂದು ಪ್ರಕರಣ ದಾಖಲಿಸಿದ್ದಾರೆ.
ದುಷ್ಕರ್ಮಿಗಳು ಮೇಗಿನಪೇಟೆ ನಿವಾಸಿ, ಒಂಟಿ ಜೀವನ ನಡೆಸುತ್ತಿರುವ ಲಲಿತಾ (45) ಅವರ ಮನೆ ಮುಂಬಾಗಿಲು ಮೂಲಕ ನುಗ್ಗಿ ಮಹಿಳೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಳಿಕ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿದ್ದರು.
ಟೇಬಲ್ ಮೇಲಿದ್ದ ಬೀಗ ಮತ್ತು ಲಾಕ್ ತೆಗೆದು ಮನೆ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಸುತ್ತಮುತ್ತಲಿನಲ್ಲಿ ಹಲವು ಮನೆಗಳಿದ್ದು, ಬೆಳಿಗ್ಗೆ ಜೋರಾಗಿ ಸುರಿಯುತ್ತಿರುವ ಮಳೆಯ ವೇಳೆ ಈ ಕೃತ್ಯ ನಡೆದಿದ್ದರಿಂದ ಯಾರ ಗಮನಕ್ಕೆ ಬಂದಿಲ್ಲ.
ಕೆಲವು ಹೊತ್ತಿನ ಬಳಿಕ ಮಹಿಳೆ ಹಿಂಬಾಗಿಲಿನಿಂದ ಬೊಬ್ಬೆ ಹೊಡೆಯುತ್ತಾ ಹೊರಗಡೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಅವರ ಹಗ್ಗಬಿಚ್ಚಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಘಟನೆ ಸಂದರ್ಭ ಮಹಿಳೆ, ಚಿನ್ನಾಭರಣ ಖದೀಮರು ಕೊಂಡೋಗಿಲ್ಲ ಎನ್ನಲಾಗಿದ್ದು, ಪೊಲೀಸರ ತನಿಖೆ ಬಳಿಕವಷ್ಟೇ ಇನ್ನಷ್ಟು ಮಾಹಿತಿ ಹೊರಬೀಳಲಿದೆ.
ಮಹಿಳೆಯ ಮುಖ, ಎದೆಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಎಸ್ಸೈ ವಿನೋದ್ ಕುಮಾರ್ ರೆಡ್ಡಿ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಪಕ್ಕದ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ.
ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಬಂಟ್ವಾಳ ಸಂಚಾರ ಎಸ್ಸೈ ರಾಜೇಶ್ ಕೆ.ವಿ. ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಮಾಹಿತಿ ಕಲೆ ಹಾಕಿದೆ. ವಿಟ್ಲ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ ದಾಖಲಾಗಿದೆ.
Kshetra Samachara
09/10/2020 08:02 pm