ಮುಲ್ಕಿ: ಸಸಿಹಿತ್ಲು ಮುಂಡಾ ಬೀಚ್ ಬಳಿ ಭಾನುವಾರ ಸಂಜೆ ಈಜಾಡಲು ತೆರಳಿ ನೀರುಪಾಲಾದ ಹಳೆಯಂಗಡಿ ಸಮೀಪದ ತೋಕೂರು ಮೂಡುಮನೆ ನಿವಾಸಿ ಮುಂಬೈ ಬಳಿಯ ಪುಣೆ ನಿವಾಸಿ ದಾಮೋದರ ಶೆಟ್ಟಿ(55) ಎಂಬವರ ಪತ್ತೆಗಾಗಿ ತೀವ್ರ ಶೋಧ ಮುಂದುವರಿದಿದೆ.
ಸಮುದ್ರದಲ್ಲಿ ನೀರುಪಾಲಾಗಿ ಮೃತಪಟ್ಟ ಸಾಣೂರು ಬೇಲಾಡಿ ನಿವಾಸಿ ಸುಂದರ ಶೆಟ್ಟಿ (35) ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದು, ಪತ್ನಿ ತುಂಬು ಗರ್ಭಿಣಿ. ಪತ್ನಿಯನ್ನು ಉಳಿಸಲು ಹೋಗಿ ನೀರು ಪಾಲಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುಂದರ ಶೆಟ್ಟಿ ಹಾಗೂ ದಾಮೋದರ ಶೆಟ್ಟಿ ಸಂಬಂಧಿಕರಾಗಿದ್ದು, ಕಾರ್ಯಕ್ರಮವೊಂದಕ್ಕೆ ಹಳೆಯಂಗಡಿ ಸಮೀಪದ ತೋಕೂರು ವೆಂಕಪ್ಪ ಶೆಟ್ಟಿ ಅವರ ಮನೆಗೆ ಔತಣ ಕೂಟಕ್ಕೆ ಬಂದಿದ್ದರು. ಔತಣಕೂಟ ಮುಗಿಸಿ ಸುಮಾರು 11 ಮಂದಿ ಸಸಿಹಿತ್ಲು ಮುಂಡಾ ಬೀಚ್ ಗೆ ತೆರಳಿದ್ದರು. ಸಸಿಹಿತ್ಲು ಸಮುದ್ರದಲ್ಲಿ ಅಪಾಯಕಾರಿ ಅಳಿವೆ ಪ್ರದೇಶದಲ್ಲಿ ಸ್ಥಳೀಯರ ಎಚ್ಚರಿಕೆ ನಿರ್ಲಕ್ಷಿಸಿ ಸುಮಾರು 8 ಮಂದಿ ನೀರಲ್ಲಿ ಆಟ, ಈಜಾಟದಲ್ಲಿರುವಾಗ ದುರ್ಘಟನೆ ನಡೆದಿದ್ದು, ಕೂಡಲೇ ಸ್ಥಳದಲ್ಲಿ ಗಾಳ ಹಾಕಲು ಬಂದಿದ್ದ ತಬ್ರೇಜ್, ಸಮದ್ ಪಡುಬಿದ್ರಿ, ರಮೀಜ್ ಹಳೆಯಂಗಡಿ, ಚಂದ್ರಕುಮಾರ್ , ಹರೀಶ್ ಬಂಗೇರ, ಸಂತೋಷ್ ಸಸಿಹಿತ್ಲು ಮತ್ತಿತರರು ಸೇರಿ ಗರ್ಭಿಣಿ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ. ಈ ನಡುವೆ ಮಕ್ಕಳನ್ನು ರಕ್ಷಿಸಲು ಸುಂದರ ಶೆಟ್ಟಿ ಮತ್ತು ದಾಮೋದರ ಶೆಟ್ಟಿ ಯತ್ನಿಸಿದಾಗ ಸಮುದ್ರದಲ್ಲಿ ಬಾರಿ ಗಾತ್ರದ ತೆರೆ ಬಂದು ನೀರುಪಾಲಾಗಿದ್ದಾರೆ ಎಂದು ಚಂದ್ರಕುಮಾರ್ ತಿಳಿಸಿದ್ದಾರೆ. ದಾಮೋದರ ಶೆಟ್ಟಿ ಪತ್ತೆಗಾಗಿ ಸೋಮವಾರ ಬೆಳಗಿನಿಂದ ಸಂಜೆಯವರೆಗೆ ಸ್ಥಳೀಯ ಮೀನುಗಾರರು ಶೋಧ ನಡೆಸಿದ್ದರೂ ಫಲ ನೀಡಿಲ್ಲ. ದಾಮೋದರ ಶೆಟ್ಟಿ ಪುಣೆಯಲ್ಲಿ ಪಾನ್ ಅಂಗಡಿ ನಡೆಸುತ್ತಿದ್ದು, ಪತ್ನಿ-ಪುತ್ರ ಇದ್ದಾರೆ.
Kshetra Samachara
11/01/2021 08:39 pm