ಮಂಗಳೂರು: ಸಮುದ್ರ ಮೀನುಗಾರಿಕೆ ಸಂದರ್ಭ ತಮಿಳುನಾಡು ಮೂಲದ ಬೋಟ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ತಕ್ಷಣ ಬೋಟ್ ನಲ್ಲಿದ್ದ 11 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.
ಘಟನೆಯಲ್ಲಿ ಓರ್ವ ಮೀನುಗಾರನಿಗೆ ಗಂಭೀರ ಗಾಯವಾಗಿದೆ. ಕರಾವಳಿ ರಕ್ಷಣಾ ಪಡೆಯು ಗಾಯಾಳುವನ್ನು ಹಾಗೂ ಇತರ ಮೀನುಗಾರರನ್ನು ನವಮಂಗಳೂರು ಬಂದರಿಗೆ ಸುರಕ್ಷಿತವಾಗಿ ಕರೆತಂದಿದೆ. ಗಾಯಾಳು ಮೀನುಗಾರನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡು ಮೂಲದ ಈ ಬೋಟ್ ಮಂಗಳೂರಿನಿಂದ 140 ನಾಟಿಕಲ್ ಮೈಲ್ ದೂರಲ್ಲಿ ಮೀನುಗಾರಿಕೆ ನಡೆಸುತ್ತಿತ್ತು. ಈ ಸಂದರ್ಭ ಬೋಟ್ ನಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡು ಬೋಟ್ ಬೆಂಕಿಗಾಹುತಿಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಭಾರತೀಯ ಕರಾವಳಿ ರಕ್ಷಣಾ ಪಡೆ ಕಾರ್ಯೋನ್ಮುಖವಾಗಿದ್ದು, ಮುಂಬೈ ಕರಾವಳಿ ರಕ್ಷಣಾ ಪಡೆಯಿಂದ ಸಾಚೇತ್ ಮತ್ತು ಸುಜಿತ್ ಎನ್ನುವ ಎರಡು ಕಾವಲು ನೌಕೆಗಳನ್ನು ಸಹಾಯಕ್ಕಾಗಿ ಕಳುಹಿಸಲಾಯಿತು. ಅಲ್ಲದೆ, ಅಪಾಯಕ್ಕೆ ಈಡಾಗಿದ್ದ ದೋಣಿಯ ತ್ವರಿತ ಪತ್ತೆಗಾಗಿ ಡಾರ್ನಿಯರ್ ವಿಮಾನವನ್ನೂ ಕಳುಹಿಸಲಾಯಿತು.
ಕರಾವಳಿ ರಕ್ಷಣಾ ಪಡೆಯು ಬೆಂಕಿಗಾಹುತಿಯಾದ ಬೋಟ್ ಪತ್ತೆ ಮಾಡಿದ್ದಲ್ಲದೆ, ಬೋಟ್ ನಲ್ಲಿದ್ದ ಮೀನುಗಾರರೊಂದಿಗೆ ಸಂವಹನ ಸಾಧಿಸಿ ಧೈರ್ಯ ತುಂಬುವಲ್ಲಿಯೂ ಸಫಲವಾಯಿತು. ಅದೇ ಸ್ಥಳಕ್ಕೆ ಕೋಸ್ಟ್‌ಗಾರ್ಡ್ ನೌಕೆಗಳೆರಡೂ ತಲುಪಿದ್ದು, ತಕ್ಷಣ ತೀವ್ರ ಗಾಯಗೊಂಡ ಓರ್ವನನ್ನು ಪ್ರಥಮ ಚಿಕಿತ್ಸೆಗೊಳಪಡಿಸಿ ಕರಾವಳಿ ಪಡೆಯ ನೌಕೆಗೆ ಸ್ಥಳಾಂತರಿಸಲಾಯಿತು.
Kshetra Samachara
10/01/2021 11:04 pm