ಮುಲ್ಕಿ: ಮುಲ್ಕಿ ಸಮೀಪದ ಸಸಿಹಿತ್ಲು ಮುಂಡಾ ಬೀಚ್ ನಲ್ಲಿ ಈಜಾಡಲು ತೆರಳಿದ್ದ ಇಬ್ಬರು ನೀರುಪಾಲಾಗಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ.
ನೀರುಪಾಲಾದವರನ್ನು ಹಳೆಯಂಗಡಿ ಸಮೀಪದ ತೋಕೂರು ನಿವಾಸಿಗಳಾದ ಸುಂದರ (45) ಮತ್ತು ದಾಮೋದರ (55) ಎಂದು ಗುರುತಿಸಲಾಗಿದೆ. ನೀರುಪಾಲಾದ ಈ ಇಬ್ಬರು ತಮ್ಮ ಕುಟುಂಬಸ್ಥರ ಸಹಿತ 11 ಮಂದಿ ಸಸಿಹಿತ್ಲು ಬಳಿಯ ಮುಂಡಾ ಬೀಚ್ ಗೆ ಬಂದಿದ್ದು, ಸ್ಥಳೀಯರ ಎಚ್ಚರಿಕೆ ನಿರ್ಲಕ್ಷಿಸಿ ಮೂವರು ಮಹಿಳೆಯರು, ಇಬ್ಬರು ಗಂಡಸರು ಹಾಗೂ ಓರ್ವ ಯುವಕ ಸೇರಿ 8 ಮಂದಿ ಈಜಾಟಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಸಮುದ್ರದಲ್ಲಿ ಆಟ, ಈಜಾಟದಲ್ಲಿ ತೊಡಗಿದ್ದವರು ಅಚಾನಕ್ ಆಗಿ ಮುಳುಗುತ್ತಿರುವುದನ್ನು ಕಂಡು ಕುಟುಂಬಸ್ಥರು ಬೊಬ್ಬೆ ಹಾಕಿದಾಗ ಸಮುದ್ರದ ಅಳಿವೆಯ ಇನ್ನೊಂದು ಬದಿಯಲ್ಲಿದ್ದ ಮಂತ್ರ ಸರ್ಫ್ ಕ್ಲಬ್ ತಂಡದ ಸದಸ್ಯರಾದ ಗಿರಿ ಬಪ್ಪನಾಡು, ಕಿರಣ್, ಅರ್ಜುನ್, ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯ ಚಂದ್ರಕುಮಾರ್ ಎಂಬವರು ದೋಣಿಯಲ್ಲಿ ಧಾವಿಸಿ ಬಂದು ಆರು ಮಂದಿಯನ್ನು ರಕ್ಷಿಸಿದ್ದು, ಸಮುದ್ರದ ಅಳಿವೆ ಬದಿಯಲ್ಲಿ ಸುಂದರ(45) ಎಂಬವರ ಶವ ಪತ್ತೆಯಾಗಿದೆ.
ನೀರುಪಾಲಾದ ಇನ್ನೊಬ್ಬ ದಾಮೋದರ್(55) ಎಂಬವರ ಪತ್ತೆಗಾಗಿ ಸ್ಥಳೀಯ ಈಜುಗಾರರು ಶ್ರಮಿಸುತ್ತಿದ್ದಾರೆ. ನೀರುಪಾಲಾದವರು ಕಾರ್ಕಳದ ಸಾಣೂರು ಬಳಿಯ ಸಂಬಂಧಿಕರ ಮನೆಗೆ ಬಂದಿದ್ದು, ಅಲ್ಲಿಂದ ಮುಲ್ಕಿ ಸಮೀಪದ ತೋಕೂರು ವೆಂಕಪ್ಪ ಶೆಟ್ಟಿ ಎಂಬವರ ಮನೆಗೆ ಕಾರ್ಯಕ್ರಮಕ್ಕೆ ಬಂದಿದ್ದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
Kshetra Samachara
10/01/2021 08:10 pm