ಬಂಟ್ವಾಳ: ವಸತಿ ಸಮುಚ್ಚಯ ವೊಂದರಿಂದ ದಿನೋಪಯೋಗಿ ವಸ್ತು ಖರೀದಿ ಮಾಡಲೆಂದು ಲಿಫ್ಟ್ ಮೂಲಕ ಕೆಳಗೆ ಇಳಿಯಲು ಹೋದ ನಾಲ್ವರು ಬಾಲಕಿಯರು ತಾಂತ್ರಿಕ ಲೋಪದಿಂದ ಲಿಫ್ಟ್ ನಲ್ಲೇ ಸುಮಾರು 2 ಗಂಟೆ ಬಾಕಿಯಾದ ಘಟನೆ ಕಲ್ಲಡ್ಕದಲ್ಲಿ ಶುಕ್ರವಾರ ನಡೆದಿದೆ.
ಸಂಜೆ ಸುಮಾರು 5.30ರ ವೇಳೆ ಕಲ್ಲಡ್ಕದ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ನಾಲ್ವರು ಬಾಲಕಿಯರು ಲಿಫ್ಟ್ ನಲ್ಲಿರುವಾಗಲೇ ವಿದ್ಯುತ್ ಸಂಪರ್ಕ ಹೋಗಿದೆ.
ಬಳಿಕ ವಿದ್ಯುತ್ ಬಂದರೂ ಲಿಫ್ಟ್ ಚಾಲೂ ಆಗಲಿಲ್ಲ. ಕೆಲಹೊತ್ತಿನ ಬಳಿಕವೂ ಹೀಗಾದಾಗ ಹೆದರಿದ ಬಾಲಕಿಯರು ಬೊಬ್ಬೆ ಹಾಕಿದರು. ಈ ವೇಳೆ ಸ್ಥಳೀಯರು ಒಟ್ಟುಗೂಡಿ ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಆಗಲಿಲ್ಲ.
ಇದೇ ಹೊತ್ತಿಗೆ ಲಿಫ್ಟ್ ಕಂಪನಿಯವರನ್ನು ಬರಹೇಳಲಾಯಿತು. ಅಗ್ನಿಶಾಮಕ ದಳದವರಿಗೂ ಕರೆ ಹೋಯಿತು.
ಈ ಕಾರ್ಯಾಚರಣೆ ನಡೆಯುತ್ತಿರುವ ಹೊತ್ತಿನಲ್ಲಿ ಉಸಿರುಗಟ್ಟದಂತೆ ಸ್ಥಳೀಯರು ಲಿಫ್ಟ್ ಮೇಲ್ಭಾಗವನ್ನು ಅರ್ಧ ತೆರೆದು ಗಾಳಿ ಬೀಸುವ ಉದ್ದೇಶದಿಂದ ಟೇಬಲ್ ಫ್ಯಾನ್ ಹಿಡಿದರು.
ಕಟ್ಟಡದ ಲಿಫ್ಟ್ ನ ಕೆಲಸ ಮಾಡಿದ ಕಂಪೆನಿ ಯವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಲಿಫ್ಟ್ ನ ತಾಂತ್ರಿಕ ದೋಷ ಸರಿಪಡಿಸಿ ಸುಮಾರು 7.15ಕ್ಕೆ ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಹೊರಗೆ ಬರುವಂತೆ ಮಾಡಿದರು.
Kshetra Samachara
25/12/2020 08:16 pm