ಮಂಗಳೂರು: ನಗರದ ಕೂಳೂರು ಸೇತುವೆ ಮೇಲೆ ಶುಕ್ರವಾರ ಬೆಳಗ್ಗೆ ಬೈಕ್‌ಗೆ ಬಸ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ.
ಮೃತ ಬೈಕ್ ಸವಾರನನ್ನು ಪಂಜಿಮೊಗರು ನಿವಾಸಿ ಅಹ್ಮದ್ ಕಬೀರ್ (22) ಎಂದು ಗುರುತಿಸಲಾಗಿದೆ.
ಅಹ್ಮದ್ ಕಬೀರ್ ಕೂಳೂರು ಸೇತುವೆಯ ಮೇಲೆ ಕೂಳೂರು ಕಡೆಯಿಂದ ಕೆಐಒಸಿಎಲ್ ಕಡೆಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದ ಬಸ್ ಹಿಂದಿನಿಂದ ಡಿಕ್ಕಿಯಾಗಿದೆ. ಪರಿಣಾಮ ಅಹ್ಮದ್ ಕಬೀರ್ ಗಂಭೀರ ಗಾಯಗೊಂಡಿದ್ದರು.
ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಕಬೀರ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/12/2020 11:14 pm