ಬೆಂಗಳೂರು: ಮಹಿಳೆಗೆ ಬೂಟು ಕಾಲಿನಲ್ಲಿ ಒದ್ದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಳೆದ 20 ದಿನದಿಂದ ಸ್ಥಗಿತಗೊಂಡಿರುವ ಟೋಯಿಂಗ್ ಸದ್ಯದ ಮಟ್ಟಿಗೆ ಅನುಷ್ಠಾನಕ್ಕೆ ಬರುವ ಲಕ್ಷಣ ಗೋಚರಿಸುತ್ತಿಲ್ಲ. ಟೋಯಿಂಗ್ ಬಂದ್ ಹಿನ್ನೆಲೆಯಲ್ಲಿ ವಾಹನ ಸವರಾರು ಟೋಯಿಂಗ್ ಉಪಟಳದಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಟೋಯಿಂಗ್ ವಿಚಾರ ಮರೆತು ಬಿಟ್ಟಿದೆ. ಹದಿನೈದು ದಿನದಲ್ಲಿ ಜನಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿಗೆ ತರುವುದಾಗಿ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದರು. ಆದರೆ 20 ದಿನ ಕಳೆದರೂ ಜನ ಸ್ನೇಹಿ ಟೋಯಿಂಗ್ ನಿಯಮ ರೂಪಿಸಲಾಗಿಲ್ಲ. ಹೀಗಾಗಿ ಮತ್ತಷ್ಟು ದಿನ ಟೋಯಿಂಗ್ ಯಥಾ ಸ್ಥಿತಿ ಸ್ಥಗಿತಗೊಳ್ಳಲಿದೆ.
ರಾಜಧಾನಿ ಬೆಂಗಳೂರಿನಲ್ಲಿರುವ 40 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಟೋಯಿಂಗ್ ವಾಹನ ಸಂಚರಿಸುತ್ತಿದ್ದವು. 400ಕ್ಕೂ ಹೆಚ್ಚು ಟೋಯಿಂಗ್ ಸಿಬ್ಬಂದಿ ದಿನ ನಿತ್ಯ ಕೆಲಸ ಮಾಡುತ್ತಿದ್ದರು. ಟೋಯಿಂಗ್ ಉಪಟಳಕ್ಕೆ ದಿನ ನಿತ್ಯ ವಾಹನ ಸವಾರರು ಜಗಳ ಮಾಡಿಕೊಳ್ಳುತ್ತಿದ್ದರು. ವಾಹನ ಸವಾರರ ಮತ್ತು ಟೋಯಿಂಗ್ ನಡುವಿನ ಸಮರ ತಾರಕಕ್ಕೇರಿತ್ತು.
ಹಲಸೂರು ಗೇಟ್ ಬೂಟೇಟು ಪ್ರಕರಣ:
ಹಲಸೂರು ಗೇಟ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಎಎಸ್ಐ ನಾರಾಯಣ್‌ಗೆ ಮಹಿಳೆಯೊಬ್ಬಳು ಕಲ್ಲು ಹೊಡೆದಿದ್ದರು. ಹಲಸೂರು ಗೇಟ್ ಸಮೀಪ ವಾಹನ ಟೋಯಿಂಗ್ ಮಾಡುವುದಕ್ಕೆ ಅಡ್ಡಿ ಪಡಿಸುತ್ತಿದ್ದ ಮಹಿಳೆ ಕಲ್ಲಿನಿಂದ ಟೋಯಿಂಗ್ ವಾಹನದಲ್ಲಿದ್ದ ಎಎಸ್ಐ ಮೇಲೆ ಕಲ್ಲು ಬೀಸಿದ್ದಳು. ಆ ಕಲ್ಲು ಎಎಸ್ಐ ಮುಖಕ್ಕೆ ಬಿದ್ದು ರಕ್ತ ಸೋರಿತ್ತು. ಇದರಿಂದ ಕುಪಿತಗೊಂಡಿದ್ದ ಎಎಸ್ಐ ನಾರಾಯಣ್ ನಡು ಬೀದಿಯಲ್ಲಿ ಮಹಿಳೆಗೆ ಬೂಟು ಕಾಲಲ್ಲಿ ಒದ್ದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸೋರಿಕೆಯಾಗಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.ಎಎಸ್ಐ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಎಎಸ್ಐ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಆ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಟೋಯಿಂಗ್ ಸ್ಥಗಿತಗೊಳಿಸಲಾಗಿತ್ತು. ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಹದಿನೈದು ದಿನವಲ್ಲ, 20 ದಿನ ಕಳೆದರೂ ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿಯಾಗಿಲ್ಲ.
ಜನ ಸ್ನೇಹಿ ಟೋಯಿಂಗ್ ನಿಯಮ ಕೂಡ ರಚನೆಯಾಗಿಲ್ಲ. ಹೀಗಾಗಿ ಮತ್ತಷ್ಟು ದಿನ ಬೆಂಗಳೂರಿನ ರಸ್ತೆಗಳಲ್ಲಿ ಟೋಯಿಂಗ್ ವಾಹನ ಇಳಿಯುವುದು ಅನುಮಾನ. ಇಳಿದರೂ ಪಾರದರ್ಶಕ ನೀತಿಯಿಂದ ಹಿಂದಿನಂತೆ ಲೂಟಿಗೆ ಬ್ರೇಕ್ ಬೀಳಲಿದೆ. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಸದ್ಯಕ್ಕೆ ಟೋಯಿಂಗ್ ಅನುಷ್ಠಾನ ಮತ್ತಷ್ಟು ತಡವಾಗಲಿದೆ ಎಂದು ಹೇಳಲಾಗುತ್ತಿದೆ.
ಕೃಪೆ: ಒನ್ ಇಂಡಿಯಾ
PublicNext
18/02/2022 10:32 pm