ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ಎಸ್​​ಪಿ- ಖಡಕ್​ ನಿರ್ಧಾರಕ್ಕೆ ಪಿಎಸ್​ಐ ಬೆಸ್ತು

ತುಮಕೂರು: ತುಮಕೂರು ಜಿಲ್ಲಾ ಪೊಲೀಸ್​ ಅಧೀಕ್ಷಕ ರಾಹುಲ್​ಕುಮಾರ್ ಅವರು ದೂರುದಾರರೊಬ್ಬರಿಗೆ ತಮ್ಮ ಕಾರನ್ನೇ ಕೊಟ್ಟ ಪ್ರಸಂಗವೊಂದು ನಡೆದಿದ್ದು, ಅವರ ಈ ನಿರ್ಧಾರಕ್ಕೆ ಪಿಎಸ್​ಐ ಬೆಸ್ತು ಬಿದ್ದಿದ್ದಾರೆ.

ಹೌದು. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಠಾಣೆಯಲ್ಲಿ ಕೊಲೆ ಪ್ರಯತ್ನವೊಂದು ದಾಖಲಾಗಿತ್ತು. ಮೂರ್ನಾಲ್ಕು ತಿಂಗಳ ಹಿಂದೆಯೇ ದೂರು ದಾಖಲಾಗಿದ್ದರೂ ಪಿಎಸ್​ಐ ಮಾತ್ರ ಆರೋಪಿಯನ್ನು ಬಂಧಿಸಿರಲಿಲ್ಲ. ದೂರುದಾರರು ನಿತ್ಯ ಠಾಣೆಗೆ ಅಲೆದು ಅಲೆದು ಸಾಕಾಗಿತ್ತು. ಸರ್​ ಆರೋಪಿ ಅಲ್ಲೇ ಇದ್ದಾನೆ ಬನ್ನಿ ಅರೆಸ್ಟ್​ ಮಾಡಿ ಅಂದ್ರೆ 'ಆರೋಪಿಯನ್ನು ಕರೆತರಲು ಬಾಡಿಗೆ ಕಾರು ತನ್ನಿ' ಎಂದು ಸೂಚಿಸಿದ್ದ ದಂಡಿನಶಿವರ ಠಾಣೆ ಪಿಎಸ್​ಐ ಶಿವಲಿಂಗಯ್ಯಗೆ ತುಮಕೂರು ಜಿಲ್ಲಾ ಪೊಲೀಸ್​ ಅಧೀಕ್ಷಕ ರಾಹುಲ್​ಕುಮಾರ್​ ಶಾಕ್​ ನೀಡಿದ್ದಾರೆ. ಎಸ್‌ಪಿ ರಾಹುಲ್​ಕುಮಾರ್ ಅವರು ನೀಡಿದ ಖಡಕ್​ ನಿರ್ಧಾರಕ್ಕೆ ಪಿಎಸ್​ಐ ಬೆಸ್ತು ಬಿದ್ದಿದ್ದಾರೆ.

ಆಗಿದ್ದೇನು?:

2021ರ ಆಗಸ್ಟ್​ 28ರಂದು ದಂಡಿನಶಿವರ ಠಾಣಾ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಾಗೇಂದ್ರಪ್ಪ ಹಾಗೂ ಪಕ್ಕದ ಮನೆಯ ಶಿವಪ್ರಕಾಶ್​ ಮತ್ತು ಪ್ರಕಾಶ್​ರ ಮಗ ಚಂದನ್​ ನಡುವೆ ಜಗಳವಾಗಿತ್ತು. ಈ ವೇಳೆ ನಾಗೇಂದ್ರಪ್ಪ ಹಾಗೂ ಪತ್ನಿ ಶಿವಮ್ಮಗೆ ಚಂದನ ಮತ್ತು ಶಿವಪ್ರಕಾಶ್ ಹಿಗ್ಗಾಮುಗ್ಗಾ ಹಲ್ಲೆಗೈದಿದ್ದರಂತೆ. ನಾಗೇಂದ್ರಪ್ಪ ಮತ್ತು ಶಿವಮ್ಮಗೆ ಗಂಭೀರ ಗಾಯಗಳಾಗಿ ತುರುವೇಕೆರೆ ಆಸ್ಪತ್ರೆ ಹಾಗೂ ತುಮಕೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಇದು ಮಾರಣಾಂತಿಕ ಹಲ್ಲೆ ಅಂತ ವರದಿ ನೀಡಿದ್ದಾರೆ. ಇದನ್ನ ಪಡೆದ ನಾಗೇಂದ್ರಪ್ಪ ದಂಡಿನಶಿವರ ಪೊಲೀಸ್ ಠಾಣೆಗೆ 307 ಕೊಲೆ ಪ್ರಯತ್ನ ಕೇಸ್ ನೀಡಿದ್ದರು.

ನಾಗೇಂದ್ರಪ್ಪ ಅವರು ಪಿಎಸ್​ಐ ವರ್ತನೆಗೆ ರೋಸಿಹೋಗಿ ಗುರುವಾರ ತುಮಕೂರಿಗೆ ಬಂದು ಜಿಲ್ಲಾ ಪೊಲೀಸ್​ ಅಧೀಕ್ಷಕ ರಾಹುಲ್​ಕುಮಾರ್​ ಅವರನ್ನು ಭೇಟಿಯಾಗಿ ಕಣ್ಣೀರಿಟ್ಟಿದ್ದರು. ಪಿಎಸ್​ಐ ವರ್ತನೆಗೆ ಕೆಂಡಾಮಂಡಲರಾದ ಎಸ್​ಪಿ, ಸ್ವತಃ ತಮ್ಮ ಕಾರಿನಲ್ಲೇ ನಾಗೇಂದ್ರಪ್ಪ ಮತ್ತು ಅವರ ಕಡೆಯವರನ್ನು ಕುಳಿತುಕೊಳ್ಳುವಂತೆ ಹೇಳಿ, ತಮ್ಮ ಕಾರು ಚಾಲಕನಿಗೆ ಕರೆದು ಇವರನ್ನು ಸೀದಾ ದಂಡಿನಶಿವರ ಪೊಲೀಸ್ ಠಾಣೆಗೆ ಬಿಟ್ಟು ಬಾ ಎಂದಿದ್ದಾರೆ. ಕಾರು ಬಂದಿದೆ ಆರೋಪಿಯನ್ನು ಬಂಧಿಸುವಂತೆ ಪಿಎಸ್​ಐ ಅವರನ್ನು ಕೇಳಿ ಎಂದು ನಾಗೇಂದ್ರಪ್ಪಗೆ ಹೇಳಿ ಕಳುಹಿಸಿದ್ದಾರೆ.

ಪೊಲೀಸ್​ ಠಾಣೆ ಮುಂದೆ ಸಾಹೇಬರ ಕಾರು ಕಂಡೊಡನೆ ದಂಗಾದ ದಂಡಿನಶಿವರ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ನಿಂತಲ್ಲಿಯೇ ಬೆವತು ಹೋಗಿದ್ದಾರೆ. ಅಷ್ಟೇ ಅಲ್ಲ, ದಂಡಿನಶಿವರ ಪಿಎಸ್​ಐ ಶಿವಲಿಂಗಯ್ಯಗೆ ದೂರವಾಣಿ ಕರೆ ಮಾಡಿದ ಎಸ್​ಪಿ ರಾಹುಲ್, ಆರೋಪಿ ಎಲ್ಲೇ ಇದ್ದರೂ ನಾಳೆ ಬೆಳಗಾಗುವಷ್ಟರಲ್ಲಿ ಬಂಧಿಸಬೇಕು ಎಂದು ಖಡಕ್​ ವಾರ್ನಿಂಗ್​ ಮಾಡಿದ್ದಾರೆ.

Edited By : Vijay Kumar
PublicNext

PublicNext

14/01/2022 03:07 pm

Cinque Terre

38.76 K

Cinque Terre

3

ಸಂಬಂಧಿತ ಸುದ್ದಿ