ನವದೆಹಲಿ: ಉತ್ತರ ಪ್ರದೇಶದ ಲಖೀಂಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ವಿಚಾರಕ್ಕೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಸರ್ಕಾರ ಹಾಗೂ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿರುವ ತನಿಖೆ ವೇಗವಾಗಿ ನಡೆಯುತ್ತಿಲ್ಲ. ಹೀಗಾಗಿ ವಿಶೇಷ ತನಿಖಾ ದಳ ನಡೆಸುತ್ತಿರುವ ತನಿಖೆಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ನಿಗಾ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ಪೀಠವು ಹೇಳಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರೂ ಈ ಪೀಠದಲ್ಲಿದ್ದಾರೆ.
ಸಿಬಿಐ ತನಿಖೆಯೊಂದೇ ಎಲ್ಲದಕ್ಕೂ ಉತ್ತರವಲ್ಲ ಎಂದ ನ್ಯಾಯಪೀಠ, ಇದೀಗ ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ. ಈ ತನಿಖೆಯ ಮೇಲುಸ್ತುವಾರಿಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ವಹಿಸಿಕೊಳ್ಳಬೇಕು. ತನಿಖೆಯ ಮೇಲೆ ನಿಗಾ ಇರಿಸಬೇಕು ಎಂದು ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆರೋಪ ಪಟ್ಟಿಗಳನ್ನು ಸಲ್ಲಿಸಬೇಕಾದ ಅಗತ್ಯತೆ ಇದೆ. ಜೊತೆಯಲ್ಲೇ ಇದೀಗ ಸಂಗ್ರಹವಾಗಿರುವ ಸಾಕ್ಷ್ಯಗಳನ್ನೂ ಜತನದಿಂದ ಕಾಪಾಡಬೇಕಿದೆ ಎಂದು ನ್ಯಾಯಪೀಠ ತಾಕೀತು ಮಾಡಿದೆ.
PublicNext
08/11/2021 04:30 pm