ಮಂಡ್ಯ: ಮಂಡ್ಯ ಎಸ್ಪಿ ನೇಮಕ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.ಜಿಲ್ಲೆಯ ನೂತನ ಎಸ್ಪಿಯಾಗಿ ಎನ್. ಯತೀಶ್ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಇವರು ಗದಗ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಾರ್ಜ್ ತೆಗೆದುಕೊಂಡ ಬೆನ್ನಲ್ಲೇ ,ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ, ರಾಷ್ಟ್ರೀಯ ಏಕತಾ ದಿನ ಹಿನ್ನಲೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಈ ಹಿಂದೆ ಎಸ್ಪಿಯಾಗಿ ನೇಮಕಗೊಂಡಿದ್ದ ಸುಮನ್ ಡಿ ಪನ್ನೇಕರ್ ಗೆ ಚಾರ್ಜ್ ತೆಗೆದುಕೊಳ್ಳದಂತೆ ಸೂಚನೆ ಕೊಡಲಾಗಿತ್ತು, ಕಳೆದ ಹತ್ತು ದಿನದಿಂದಲೂ ಖಾಲಿಯಾಗಿದ್ದ ಎಸ್ಪಿ ಹುದ್ದೆಯನ್ನು ಇದೀಗ ಭರ್ತಿ ಮಾಡಿ ಸಕ್ಕರೆ ನಾಡಿಗೆ ಹೊಸ ಎಸ್ಪಿ ಆಗಮಿಸಿದ್ದಾರೆ.
ಇನ್ನು ಸುಮನ್ ಡಿ.ಪನ್ನೇಕರ್ ಅವರನ್ನು ಉತ್ತರಕನ್ನಡ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಈ ಹಿಂದಿನ ಎಸ್ಪಿಯಾಗಿದ್ದ ಡಾ.ಅಶ್ವಿನಿ ಅವರನ್ನು ಬಹಳಷ್ಟು ವಿವಾದಗಳಿಂದ ವರ್ಗಾಯಿಸಲಾಗಿತ್ತು. ಅಶ್ವಿನಿ ವರ್ಗಾವಣೆ ಬಳಿಕ ಗೊಂದಲದಲ್ಲಿದ್ದ ನೂತನ ಎಸ್ಪಿ ನೇಮಕ ವಿಚಾರಕ್ಕೆ ಇತಿಶ್ರೀ ಹಾಡಿರುವ ರಾಜಕಾರಣಿಗಳು ಕಡೆಗೂ ಪುರುಷ ಎಸ್ಪಿ ನೇಮಕ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
PublicNext
31/10/2021 03:10 pm