ನವದೆಹಲಿ: ಮೊನ್ನೆ ದೆಹಲಿಯ ರೋಹಿಣಿ ಏರಿಯಾದ ನ್ಯಾಯಾಲಯದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಗ್ಯಾಂಗ್ ಸ್ಟರ್ ಜೀತೆಂದರ್ ಗೊಗಿ ಸೇರಿ ಮೂವರು ಮೃತಪಟ್ಟ ಬೆನ್ನಲ್ಲೇ ದೆಹಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. ಹೌದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ಥಾನ ಅವರು ಡಿಸಿಪಿ (ಡೆಪ್ಯೂಟಿ ಕಮಿಷನರ್) ಶ್ರೇಣಿ 11 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.
ವರ್ಗಾವಣೆಯ ಪರಿಣಾಮ ಇದೇ ಮೊದಲ ಬಾರಿಗೆ ದೆಹಲಿಯ 15 ಪೊಲೀಸ್ ಜಿಲ್ಲೆಗಳಲ್ಲಿ 6ರಲ್ಲಿ ಮಹಿಳಾ ಡಿಸಿಪಿಗಳು ಅಧಿಕಾರ ವಹಿಸಿಕೊಂಡಿದ್ದಾರೆ.
ಆದೇಶದ ಪ್ರಕಾರ ಪ್ರಸ್ತುತ ಸೆವೆಂತ್ ಬೆಟಾಲಿಯನ್ ನ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ 2010ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಬೆನಿತಾ ಮೇರಿ ಜೈಕರ್ ಅವರನ್ನು ದೆಹಲಿಯ ದಕ್ಷಿಣ ಜಿಲ್ಲೆಗೆ ಡಿಸಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಡಿಸಿಪಿ ಹೆಡ್ಕ್ವಾಟ್ರಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ವೇತಾ ಚೌಹಾಣ್ (2010) ಅವರನ್ನು ಡಿಸಿಪಿ ಸೆಂಟ್ರಲ್ ಗೆ ವರ್ಗಾವಣೆ ಮಾಡಲಾಗಿದೆ. ಡಿಸಿಪಿ ಪಿಸಿಆರ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಶಾ ಪಾಂಡೆ (2010) ಅವರನ್ನು ಡಿಸಿಪಿ ಸೌತ್ ಈಸ್ಟ್ ಗೆ ವರ್ಗಾಯಿಸಲಾಗಿದೆ.
ಉಳಿದ ಮೂವರು ಡಿಸಿಪಿಗಳಾದ ಉಶಾ ರಂಗನಾನಿ, ಪ್ರಿಯಾಂಕ ಕಶ್ಯಪ್ ಮತ್ತು ಉರ್ವಿಜಾ ಗೋಯೆಲ್ ಅವರನ್ನು ಕ್ರಮವಾಗಿ ನಾರ್ತ್ ವೆಸ್ಟ್, ಈಸ್ಟ್ ಮತ್ತು ವೆಸ್ಟ್ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಡಿಸಿಪಿ ಸೆಂಟ್ರಲ್ ಜಿಲ್ಲೆಯ ಜಸ್ಮೀತ್ ಸಿಂಗ್, ಡಿಸಿಪಿ ಸೌತ್ ವೆಸ್ಟ್ ಜಿಲ್ಲೆಯ ಇಂಗಿತ್ ಪ್ರತಾಪ್ ಸಿಂಗ್ ಮತ್ತು ಡಿಸಿಪಿ ಹೊರ ಉತ್ತರ ಜಿಲ್ಲೆಯ ರಾಜೀವ್ ರಂಜನ್ ವರ್ಗಾವಣೆಗೊಂಡಿದ್ದು, ವಿಶೇಷ ಸೆಲ್ ನ ಡಿಸಿಪಿಯಾಗಿ ನೇಮಕಗೊಂಡಿದ್ದಾರೆ. ಕೆಪಿಎಸ್ ಮಲ್ಹೋತ್ರಾ ಅವರನ್ನು ಸೈಬರ್ ಸೆಲ್ ನ ಡಿಸಿಪಿಯಾಗಿ ನೇಮಿಸಲಾಗಿದೆ.
PublicNext
26/09/2021 03:09 pm